ಬೆಂಗಳೂರು: ಗ್ಯಾರಂಟಿಗಳಿಗಾಗಿ ಹಾಲು, ಮದ್ಯ, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿ ಜನರಿಗೆ ರಾಜ್ಯ ಸರ್ಕಾರವು ಸಂಕಷ್ಟ ತಂದಿಟ್ಟಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.
ವಿಧಾನಸಭೆಯಲ್ಲಿ ಇಂದು ನಿಯಮ 69ರಡಿ ಸಾರ್ವಜನಿಕ ಮಹತ್ವದ ವಿಷಯಗಳ ಬಗ್ಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳಿಗೆ ಅನುದಾನ ನೀಡುತ್ತಿಲ್ಲ. ನಾವು ಬಂದರೆ, ಬೆಂಗಳೂರನ್ನು ಕೃಷ್ಣದೇವರಾಯನ ಕಾಲದ ರೀತಿ ಮಾಡುತ್ತೇವೆ. ವಜ್ರಗಳು ರಸ್ತೆಯಲ್ಲಿ ಸಿಗುತ್ತವೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದರು. ಆದರೆ, ಈಗ ಜಲ್ಲಿ ಕಲ್ಲುಗಳು ಸಿಗುತ್ತವೆ. ಜೊತೆಗೆ ರಸ್ತೆಗಳ ಮೇಲೆ ಗುಂಡಿಗಳು, ಕೆಳಗಡೆ ಸುರಂಗದ ಕನಸುಗಳು-ಇದುವೇ ಕಾಂಗ್ರೆಸ್‌ನ ಬ್ರ್ಯಾಂಡ್ ಬೆಂಗಳೂರಿನ ಪರಿಕಲ್ಪನೆಯಾಗಿದೆ ಎಂದು ಲೇವಡಿ ಮಾಡಿದರು.
ಅನುದಾನ ಹಂಚಿಕೆ, ಅಭಿವೃದ್ಧಿ ವಿಚಾರದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಸ್ವಪಕ್ಷದ ಶಾಸಕರೇ ಆಕ್ರೋಶ ಹೊರಹಾಕುತ್ತಿದ್ದು, ಸಿದ್ದರಾಮಯ್ಯ ಅವರ ಸರ್ಕಾರ ಒಡೆದ ಮನೆಯಾಗಿದೆ. ಅನುದಾನ ಹಂಚಿಕೆ, ಅಭಿವೃದ್ಧಿಯಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಕಿಡಿಕಾರಿದರು.
ಈ ಹಿಂದೆ ನಮ್ಮ ಸರ್ಕಾರ ಇದ್ದ ಸಂದರ್ಭದಲ್ಲಿ ಮಾಡಿದ್ದ ಶೇ.40 ಆರೋಪಕ್ಕೆ ಸಾಕ್ಷಿ ಇಲ್ಲ. ಆದರೆ ಕಾಂಗ್ರೆಸ್ ಸರ್ಕಾರ ಶೇ.70 ಕಮಿಷನ್ ಪಡೆದುಕೊಳ್ಳುತ್ತಿದೆ. ಮನೆ, ಕಟ್ಟಡ ನಿರ್ಮಾಣಕ್ಕೆ ಅರ್ಜಿ ಸಲ್ಲಿಸಿದ ಆರಂಭದಲ್ಲೇ ಕಮಿಷನ್ ನೀಡುವ ವ್ಯವಸ್ಥೆ ಹುಟ್ಟುಹಾಕಿದೆ. ಜನರ ಮೇಲೆ ತೆರಿಗೆ ಭಾರ ಹಾಕುವಲ್ಲಿ ಈ ಸರ್ಕಾರ ಯಶಸ್ವಿಯಾಗಿದೆ ಎಂದು ವಾಗ್ದಾಳಿ ನಡೆಸಿದರು.
ನಗರದ ರಸ್ತೆಗಳಲ್ಲಿ ಎಲ್ಲಿ ನೋಡಿದರೂ ಗುಂಡಿಗಳಿದ್ದು, ಸಾವಿನ ಕೂಪವಾಗಿ ಮಾರ್ಪಟ್ಟಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆ, ಬಿಬಿಎಂಪಿಯ ನಿರುತ್ಸಾಹ ಮತ್ತು ಕಾಂಗ್ರೆಸ್ ಆಡಳಿತದ ವೈಫಲ್ಯವನ್ನು ಇದು ತೋರಿಸುತ್ತದೆ ಎಂದು ಹೇಳಿದರು.
ರಾಜು ಕಾಗೆ ಕಳೆದ ವರ್ಷದಿಂದ ನನ್ನ ಗೋಳು ಆಲಿಸುತ್ತಿಲ್ಲ, ಹೀಗಾಗಿ ವಿಧಾನಸೌಧಕ್ಕೆ ಹೋಗಿ ಆತ್ಮಹತ್ಯೆ ಮಾಡಿಕೊಳ್ತೀನಿ ಎಂದಿದ್ದಾರೆ ಎಂದು ಹೇಳಿದರು. ವಿರೋಧ ಪಕ್ಷದವರು ಆತ್ಮಹತ್ಯೆ ಮಾಡಿಕೊಳ್ಳಬೇಕು. ಆದರೆ ಆಡಳಿತ ಪಕ್ಷದ ಶಾಸಕರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆ. ಬಿ.ಆರ್. ಪಾಟೀಲ್ ಕೂಡ ನಾನು ಹೇಳಿರುವುದು ಸತ್ಯ ಎಂದಿದ್ದಾರೆ. ದಾವಣಗೆರೆ ಶಾಸಕ ನಾನು ತೆಂಗಿನಕಾಯಿಯನ್ನೇ ಒಡೆದಿಲ್ಲ ಎಂದಿದ್ದಾರೆ. ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಸತ್ಯ ನುಡಿಯುವಂತವರು. ಅವರು ಬಾಗಲಕೋಟೆ ಬಾದಾಮಿ ಯಲ್ಲಿ ಬೆಂಕಿ ಹಾರಿಸಲು ಹೋಗಿದ್ದರು. ಆದರೆ ಅಲ್ಲಿ ಬೆಂಕಿ ಹಚ್ಚಿ ಬಂದಿದ್ದಾರೆ ಎಂದರು.
ಸರ್ಕಾರಿ ಆಸ್ಪತ್ರೆಗೆ ಜನ ಹೋಗುತ್ತಾರೆ. ಅಲ್ಲಿ ಸಹ ಶೇ.100 ರಷ್ಟು ತೆರಿಗೆ ಹಾಕಿದ್ದಾರೆ. ನಾನು ಜಯನಗರ ಆಸ್ಪತ್ರೆಗೆ ಹೋಗಿದ್ದೆ. ಅಲ್ಲಿ ಪ್ರತಿ ಸರಿ ಬಂದಾಗ ಬಳಕೆದಾರರು ಹಣ ಕಟ್ಟಬೇಕು ಎಂದು ಟೀಕಿಸಿದರು.
ಮೈಸೂರು ಮೃಗಾಲಯ ನೋಡಲು ಸಹ ಶೇ.20 ರಷ್ಟು ದರ ಹೆಚ್ಚಳ ಮಾಡಿದ್ದಾರೆ. ಅದೇ ಹುಲಿ, ಅದೇ ಜಿರಾಫೆಗೆ ಬಣ್ಣ ಸುಣ್ಣ ಹೊಡೆದು ವಿದೇಶಿ ಬಟ್ಟೆ ಹಾಕಿದರೆ ಪರವಾಗಿಲ್ಲ. ಏನೂ ಇಲ್ಲದೆ ಶೇ.20 ರಷ್ಟು ಹೇಗೆ ಆಗುತ್ತದೆ. ಅಲ್ಲಿಯೂ ವಸೂಲಿ ಮಾಡಬೇಕಾ?. ಅಲ್ಲಿ ಮಕ್ಕಳು ಹೋಗುತ್ತಾರೆ ಎಂದರು.