ದಾವಣಗೆರೆ: ಸರ್ಕಾರ ಜನರ ಅಪೇಕ್ಷೆಯಂತೆ ಎಸ್ಐಟಿ ತನಿಖೆಗೆ ಆದೇಶಿಸಿದೆ. ಶನಿವಾರದಿಂದ (ಜು.26) ತನಿಖೆ ಆರಂಭವಾಗಿದೆ. ತನಿಖೆಯ ವರದಿ ಬರುವವರೆಗೂ ನಾವು ಏನೂ ಮಾಹಿತಿ ನೀಡುವಂತಿಲ್ಲ ಎಂದು ಧರ್ಮಸ್ಥಳದಲ್ಲಿ ನಡೆದಿವೆ ಎನ್ನಲಾದ ಅಸಹಜ ಸಾವಿನ ಪ್ರಕರಣಗಳ ಕುರಿತು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಪ್ರತಿಕ್ರಿಯಿಸಿದರು.
ಈ ಕುರಿತು ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಕ್ಲು ಶಿವು ಕೊಲೆ ಪ್ರಕರಣ ಕೂಡ ಸಿಒಡಿಗೆ ನೀಡಲಾಗಿದೆ. ವಿಚಾರಣೆ ನಡೆಯುತ್ತಿದೆ, ಬೈರತಿ ಬಸವರಾಜ್ ಅಲ್ಲ ಯಾರೇ ಇದ್ದರೂ ತನಿಖೆ ನಂತರ ಗೊತ್ತಾಗಲಿದೆ. ತಪ್ಪಿತಸ್ಥರಿಗೆ ಕಾನೂನಿನ ಪ್ರಕಾರ ಶಿಕ್ಷೆಯಾಗಲಿದೆ. ಈ ಪ್ರಕರಣದಲ್ಲಿ ಯಾವುದೇ ರಾಜಕೀಯ ಒತ್ತಡ ಇಲ್ಲ ಎಂದು ಹೇಳಿದರು.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಅವರು ಸೂಪರ್ ಸಿಎಂ ರೀತಿ ವರ್ತಿಸುತ್ತಿದ್ದಾರೆ ಎಂಬ ಆರೋಪದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಗೃಹ ಸಚಿವರು, ಅವರ ಆರೋಪದಲ್ಲಿ ಯಾವುದೇ ಸತ್ಯಾಂಶವಿಲ್ಲ, ಇದೇನು ಹೊಸದಲ್ಲ. ಯಾವತ್ತೂ ಕೂಡಾ ನಮ್ಮ ಅಖಿಲ ಭಾರತ ಕಾಂಗ್ರೆಸ್ ಪಕ್ಷದಲ್ಲಿ ಪ್ರಧಾನ ಕಾರ್ಯದರ್ಶಿಗಳನ್ನು ಒಂದೊಂದು ರಾಜ್ಯಕ್ಕೆ ನೇಮಕ ಮಾಡುತ್ತಾರೆ. ಹಾಗೆಯೇ, ನಮ್ಮ ರಾಜ್ಯಕ್ಕೆ ಅವರನ್ನು(ಸುರ್ಜೇವಾಲಾ) ನೇಮಕ ಮಾಡಿದ್ದಾರೆ. ಚುನಾವಣೆಗೆ ಮೊದಲು ಇದ್ರು, ಈಗಲೂ ಇದ್ದಾರೆ. ಪಕ್ಷದ ಪ್ರಣಾಳಿಕೆಯಲ್ಲಿ ನಾವು ಜನರಿಗೆ ಕೊಟ್ಟಿರುವ ಭರವಸೆಯನ್ನು ಅನುಷ್ಠಾನ ಮಾಡಿದ್ದಾರೆಯೇ, ಇಲ್ಲವೆ ಎಂದು ಆಗಾಗ್ಗೆ ಬಂದು ನೋಡುತ್ತಾ ಇರುತ್ತಾರೆ. ಅದು ನಮ್ಮ ಪಕ್ಷದ ಜವಾಬ್ದಾರಿ ಕೂಡ. ಹಾಗಾಗಿ ಅವರು ಬರ್ತಾರೆ, ಹೋಗ್ತಾರೆ. ಯಾವ ಅಧಿಕಾರಿಗಳೊಂದಿಗೆ ಮಾತನಾಡಿಲ್ಲ ಹಾಗೂ ಸೂಚನೆಯನ್ನೂ ಕೊಟ್ಟಿಲ್ಲ. ಆಡಳಿತದಲ್ಲಿ ಅವರದ್ದು ಯಾವುದೇ ರೀತಿಯ ಹಸ್ತಕ್ಷೇಪ ಇಲ್ಲ. ಬಿಜೆಪಿಯವರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆಯೇ ಹೊರತು, ಅದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಹೇಳಿದ್ದಾರೆ.