Breaking News

ಕೊರೊನಾ ಮಹಾಮಾರಿ ಬೆಂಗಳೂರಿನ ಮೂಲೆ ಮೂಲೆಗಳಿಗೂ ವ್ಯಾಪಿಸುತ್ತಿದೆ…………

Spread the love

ಬೆಂಗಳೂರು, ಜೂ.15-ಕೊರೊನಾ ಮಹಾಮಾರಿ ಬೆಂಗಳೂರಿನ ಮೂಲೆ ಮೂಲೆಗಳಿಗೂ ವ್ಯಾಪಿಸುತ್ತಿದೆ. 198 ವಾರ್ಡ್‍ಗಳಲ್ಲಿ ಈಗಾಗಲೇ 122 ವಾರ್ಡ್‍ಗಳಿಗೆ ಮಹಾಮಾರಿ ಕಾಲಿಟ್ಟಿದ್ದು, 142 ಕಂಟೇನ್ಮೆಂಟ್ ಜೋನ್‍ಗಳನ್ನು ಸ್ಥಾಪಿಸಲಾಗಿದೆ.

ನಿನ್ನೆಯಿಂದೀಚೆಗೆ 32 ಕಂಟೈನ್‍ಮೆಂಟ್ ಪ್ರದೇಶಗಳನ್ನು ಗುರುತಿಸಲಾಗಿದ್ದು, ನಗರದ ಪ್ರತಿಯೊಂದು ರಸ್ತೆಗೂ ಬೀಳುತ್ತಿವೆ ಸೀಲ್‍ಡೌನ್ ಬ್ಯಾರಿಕೇಡ್‍ಗಳು.

ನಗರದ ಎಂಟು ವಲಯಗಳಿಗೂ ಮಹಾಮಾರಿ ಹಬ್ಬುತ್ತಿದ್ದು, ಬಿಬಿಎಂಪಿ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಸೋಂಕು ತಡೆಗಟ್ಟಲು ಹರಸಾಹಸ ಪಡುತ್ತಿದ್ದಾರೆ.

ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮಿತಿ ಮೀರುವ ಸಾಧ್ಯತೆ ಇದ್ದು, ಸೋಂಕು ತಡೆಗಟ್ಟಲು ಎಷ್ಟೇ ಕ್ರಮಗಳನ್ನು ಕೈಗೊಂಡಿದ್ದರೂ ಪ್ರಯೋಜನಕ್ಕೆ ಬಾರದಂತಾಗಿರುವುದು ಅಧಿಕಾರಿಗಳ ತಲೆ ಬಿಸಿ ಮಾಡಿದೆ.

ಪಶ್ಚಿಮ ವಲಯ ಒಂದರಲ್ಲೇ 35 ಕಂಟೇನ್ಮೆಂಟ್ ಜೋನ್‍ಗಳಿದ್ದು, ಅತಿ ಹೆಚ್ಚು ಸೋಂಕಿತರು ಇದೇ ವ್ಯಾಪ್ತಿಯಲ್ಲಿವೆ. ಇದುವರೆಗೂ ಪಶ್ಚಿಮ ವಲಯದಲ್ಲಿ 142 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, 8 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

ಪಶ್ಚಿಮ ವಲಯ ನಂತರದ ಸ್ಥಾನ ಪೂರ್ವ ವಲಯದ್ದಾಗಿದ್ದು, ಇಲ್ಲಿ 24 ಕಂಟೇನ್ಮೆಂಟ್ ಜೋನ್‍ಗಳಿದ್ದು, 136 ಮಂದಿಗೆ ಸೋಂಕು ತಗುಲಿದ್ದು, 8 ಮಂದಿ ಮೃತಪಟ್ಟಿದ್ದಾರೆ.

ದಕ್ಷಿಣ ವಲಯದಲ್ಲಿ 23 ಕಂಟೇನ್ಮೆಂಟ್ ಜೋನ್‍ಗಳಿದ್ದು, 76 ಜನರಿಗೆ ಸೋಂಕು ಕಾಣಿಸಿಕೊಂಡಿದ್ದು, 6 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಬೊಮ್ಮನಹಳ್ಳಿ ವಲಯದಲ್ಲಿ 17 ಕಂಟೇನ್ಮೆಂಟ್ ಜೋನ್‍ಗಳಿದ್ದು, 98 ಜನರಿಗೆ ಸೋಂಕು ತಗುಲಿದೆ.

ಮಹದೇವಪುರ ವಲಯದಲ್ಲಿ 15 ಜೋನ್‍ಗಳಿದ್ದು, 36 ಮಂದಿ ಸೋಂಕಿತರಿದ್ದಾರೆ. ಯಲಹಂಕ, ದಾಸರಹಳ್ಳಿ ಹಾಗೂ ಆರ್.ಆರ್.ನಗರ ವಲಯದಲ್ಲಿ ಲಾಕ್‍ಡೌನ್ ವಿನಾಯ್ತಿ ನಂತರ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ.

ಯಲಹಂಕ ವಲಯದಲ್ಲಿ 6 ವಾರ್ಡ್‍ಗಳನ್ನು ಕಂಟೇನ್ಮೆಂಟ್ ಜೋನ್ ಮಾಡಲಾಗಿದ್ದು, ಇದುವರೆಗೂ 11 ಜನರಿಗೆ ಕೊರೊನಾ ಸೋಂಕು ತಗುಲಿದೆ. ದಾಸರಹಳ್ಳಿ ವಲಯದಲ್ಲಿ 5 ವಾರ್ಡ್‍ಗಳು ಕಂಟೇನ್ಮೆಂಟ್ ಜೋನ್‍ಗಳಾಗಿದ್ದು, 6 ಮಂದಿಗೆ ಸೋಂಕು ತಗುಲಿದರೆ, ಆರ್.ಆರ್.ನಗರದ 2 ವಾರ್ಡ್‍ಗಳು ಕಂಟೇನ್ಮೆಂಟ್ ಜೋನ್‍ಗಳಾಗಿದ್ದು, ಐವರಿಗೆ ಸೋಂಕು ಕಾಣಿಸಿಕೊಂಡಿದ್ದು, ಇವರಲ್ಲಿ ಒಬ್ಬ ಕೊರೊನಾ ವೈರಸ್‍ಗೆ ಬಲಿಯಾಗಿದ್ದಾನೆ.

ಒಟ್ಟಾರೆ 122 ವಾರ್ಡ್‍ಗಳಿಗೂ ಮಹಾಮಾರಿ ವಕ್ಕರಿಸಿದ್ದು, ಮುಂದಿನ ಎರಡು ತಿಂಗಳೊಳಗೆ ಇಡೀ ನಗರಕ್ಕೇ ಸೋಂಕು ಹರಡುವ ಭೀತಿ ಎದುರಾಗಿದೆ. ಲಾಕ್‍ಡೌನ್ ತೆರವು ನಂತರ ನಾಗರಿಕರು ಸೋಂಕಿಗೆ ಅಳುಕದೆ ಸಾಮಾನ್ಯ ರೀತಿಯಲ್ಲಿ ಓಡಾಡುತ್ತಿರುವುದೇ ಕೊರೊನಾ ಮಾಹಾಮರಿ ಹೆಚ್ಚಾಗಲು ಕಾರಣ ಎನ್ನಲಾಗಿದೆ.

ಇನ್ನು ಮುಂದಾದರೂ ಸಾರ್ವಜನಿಕರು ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದನ್ನು ಮರೆತು ಮಾಸ್ಕ್ ಇಲ್ಲದೆ ಸುಖಾಸುಮ್ಮನೆ ಓಡಾಡಿದರೆ ನಿಮ್ಮ ಮನೆಗೂ ಮಹಾಮಾರಿ ಅತಿಥಿಯಾಗುವುದು ಗ್ಯಾರಂಟಿ.


Spread the love

About Laxminews 24x7

Check Also

ಮೊಬೈಲ್ ನೋಡ್ಬೇಡ ಎಂದು ಬುದ್ಧಿ ಹೇಳಿದ್ದಕ್ಕೆ ವಿಷ ಸೇವಿಸಿ ಆತ್ಮಹತ್ಯೆ

Spread the loveಶಿವಮೊಗ್ಗ, (: ಮೊಬೈಲ್ (Mobile) ಹೆಚ್ಚು ನೋಡಬೇಡ ಎಂದು ಪೋಷಕರು ಬುದ್ಧಿ ಹೇಳಿದ್ದಕ್ಕೆ ಯುವತಿಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ