Breaking News

ದೀಪದಿಂದ ಮನೆಗೆ ಹೊತ್ತಿಕೊಂಡ ಬೆಂಕಿ: 4 ಕುರಿ ಸಜೀವ ದಹನ, ಟ್ರ್ಯಾಕ್ಟರ್​ ಖರೀದಿಗೆ ಇಟ್ಟಿದ್ದ 4.75 ಲಕ್ಷ ರೂ. ನಗದು ಸುಟ್ಟು ಭಸ್ಮ

Spread the love

ಬೆಳಗಾವಿ: ಮಹಿಳೆಯರೇ ದುಡಿದು ಆ ಕುಟುಂಬ ಜೀವನ ಸಾಗಿಸುತ್ತಿತ್ತು.

ಎಲ್ಲರ ಮನೆಯಲ್ಲಂತೆ ಈ ಮನೆಯಲ್ಲಿಯೂ ದೀಪಾವಳಿ ಸಂಭ್ರಮ ಮನೆ ಮಾಡಿತ್ತು. ನಾಳೆ ಬೆಳಕಾದರೆ ಮನೆಗೆ ಟ್ರ್ಯಾಕ್ಟರ್ ತರುವ ಖುಷಿಯಲ್ಲಿದ್ದರು. ಆದರೆ ವಿಧಿ ಈ ಕುಟುಂಬದ ಜೊತೆ ಚೆಲ್ಲಾಟ ಆಡಿದೆ. ಆಕಸ್ಮಿಕವಾಗಿ ಹತ್ತಿದ ಬೆಂಕಿಗೆ ಸಂಪೂರ್ಣ ಮನೆ ಸುಟ್ಟು ಭಸ್ಮವಾಗಿ, ಬದುಕು ಬೀದಿಗೆ ಬಂದಿದೆ.

ಹೌದು ಬಸವನ ಕುಡಚಿ ಗ್ರಾಮದ ಸವಿತಾ ದುನೊಳ್ಳಿ ಮತ್ತು ಅನಿತಾ ಕೌಲಗಿ ಎಂಬ ಸಹೋದರಿಯರಿಗೆ ಸೇರಿದ ಎರಡೂ ಮನೆಗಳು ಬೆಂಕಿಗೆ ಆಹುತಿಯಾಗಿವೆ. ದೀಪಾವಳಿ ಹಬ್ಬದ ನಿಮಿತ್ತ ದೇವರ ಮುಂದೆ ಹಚ್ಚಿದ್ದ ದೀಪದಿಂದ ಬೆಂಕಿ ಕಾಣಿಸಿಕೊಂಡಿದೆ. ಬಳಿಕ ಸಿಲಿಂಡರ್ ಬ್ಲಾಸ್ಟ್ ಆಗಿ ಬೆಂಕಿಯ ಕೆನ್ನಾಲೆಗೆ ನೋಡ ನೋಡುತ್ತಿದ್ದಂತೆ ಎರಡೂ ಮನೆಗಳು ಸುಟ್ಟು ಕರಕಲಾಗಿವೆ.

ಬೆಂಕಿ ಅವಘಡದಲ್ಲಿ 4 ಕುರಿಗಳು ಸಜೀವ ದಹನವಾಗಿದ್ದು, ಒಟ್ಟು 4.75 ಲಕ್ಷ ರೂ. ಹಣ, 50 ಗ್ರಾಂ ಬಂಗಾರದ ಆಭರಣಗಳು, ಬೆಳ್ಳಿ ಆಭರಣಗಳು, ದಿನಬಳಕೆ ವಸ್ತುಗಳು, ಪಾತ್ರೆಗಳು, ಬ್ಯಾಂಕ್ ಪಾಸ್ ಬುಕ್, ಮನೆ ದಾಖಲೆಗಳು, ಬಟ್ಟೆಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿವೆ. ಅದೃಷ್ಟವಶಾತ್ ಮನೆಯವರೆಲ್ಲಾ ಹೊರಗಡೆ ಹೋಗಿದ್ದರಿಂದ ಯಾವುದೇ ಜೀವಹಾನಿ ಆಗಿಲ್ಲ. ಘಟನೆ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ, ಸ್ಥಳೀಯರು ಹಾಗೂ ಮಾಳಮಾರುತಿ ಠಾಣೆ ಪೊಲೀಸರು ಬೆಂಕಿ ನಂದಿಸಲು ಹರ ಸಾಹಸ ಪಟ್ಟರು.

ಟ್ರ್ಯಾಕ್ಟರ್​ ಖರೀದಿಗೆ ಕೂಡಿಟ್ಟಿದ್ದ ಹಣ ಬೆಂಕಿಗೆ ಆಹುತಿ: ಅನಿತಾ ಕೌಲಗಿ ಅವರ ಮಗ ಅಭಿಷೇಕನಿಗೆ ಟ್ರ್ಯಾಕ್ಟರ್ ಕೊಡಿಸಲು ವರ್ಷಾನುಗಟ್ಟಲೇ ದುಡಿದು 4.75 ಲಕ್ಷ ಹಣವನ್ನು ಕೂಡಿಸಿ ಮನೆಯಲ್ಲಿ ಇಟ್ಟಿದ್ದರು. ಆದರೆ ಬೆಂಕಿ ದುರಂತದಲ್ಲಿ ಆ ಅಷ್ಟೂ ಹಣ ಸುಟ್ಟಿದ್ದು, ಇಡೀ ಕುಟುಂಬ ಕಣ್ಣೀರು ಇಡುತ್ತಿದೆ. ದುರಂತದ ಬಗ್ಗೆ ಮಾತನಾಡಿರುವ ಅನಿತಾ, ಮನೆಯಲ್ಲಿ ಏನಂದರೆ ಏನೂ ಉಳಿದಿಲ್ಲ. ಬೂದಿ ಬಿಟ್ಟರೆ ಬೇರೆ ಏನೂ ಕಾಣಿಸುತ್ತಿಲ್ಲ. ಏನು ಹೇಳಬೇಕು ಅಂತಾನೂ ನಮಗೆ ಗೊತ್ತಾಗುತ್ತಿಲ್ಲ. ತಿನ್ನೋಕೆ ತುತ್ತು ಅನ್ನ, ತೊಡೋಕೆ ಒಂದು ಬಟ್ಟೆಯೂ ಕೂಡ ಉಳಿದಿಲ್ಲ. ತವರು ಮನೆಯವರು ಕೊಟ್ಟಿದ್ದ ಜಾಗದಲ್ಲಿ ಇರೋದಿಕ್ಕೆ ಮನೆ ಕಟ್ಟಿಕೊಂಡಿದ್ದೆವು. ಊರಿಗೆ ಹೋಗಿ ಬರಬೇಕೆಂದು ಹೋದಾಗ ಈ ರೀತಿ ಆಗಿದೆ ಎಂದು ಕಣ್ಣೀರು ಹಾಕಿದರು.

ಸ್ಥಳೀಯ ತಮ್ಮಣ್ಣ ಮಾತನಾಡಿ, ಆಕಸ್ಮಿಕವಾಗಿ ಈ ಘಟನೆ ನಡೆದಿದೆ. ಸುದ್ದಿ ತಿಳಿಯುತ್ತಿದ್ದಂತೆ ನಾವು ಕೂಡ ಸ್ಥಳಕ್ಕೆ ಬಂದೆವು. ಕೂಡಲೇ ಅಗ್ನಿಶಾಮಕ ದಳದವರಿಗೂ ಮಾಹಿತಿ ನೀಡಿದೆವು. ಅವರ ಎರಡು ವಾಹನಗಳ ಸಹಾಯದಿಂದ ಬೆಂಕಿ ನಂದಿಸಲಾಯಿತು‌. ಅಷ್ಟೋತ್ತಿಗಾಗಲೇ ಮನೆ ಸಂಪೂರ್ಣ ಸುಟ್ಟಿತ್ತು. ಮನೆಯಲ್ಲಿದ್ದ ಹಣ, ಬಂಗಾರ ಸೇರಿ ಎಲ್ಲವೂ ಸುಟ್ಟು ಭಸ್ಮವಾಗಿವೆ. ಪಾಪ ದುಡಿದುಕೊಂಡು ತಿನ್ನುವವರು. ಸರ್ಕಾರ ಅವರಿಗೆ ಸಹಾಯ ಮಾಡಬೇಕು ಎಂದು ಮನವಿ ಮಾಡಿದರು.

ಸ್ವೀಟ್ ಮಾರ್ಟ್​ನಲ್ಲಿ ಸವಿತಾ ದುನೊಳ್ಳಿ ಕೆಲಸ ಮಾಡುತ್ತಿದ್ದರೆ, ಸಹೋದರಿ ಅನಿತಾ ಕೌಲಗಿ ಹಣ್ಣಿನ ವ್ಯಾಪಾರ ಮಾಡುತ್ತಿದ್ದರು. ಇಬ್ಬರು ತಮ್ಮ ತಾಯಿ ಜೊತೆಗೆ ದುಡಿದು ಜೀವನ ಸಾಗಿಸುತ್ತಿದ್ದರು. ಈಗ ಬೆಂಕಿ ದುರಂತದಿಂದ ಮುಂದೇನು ಎಂಬ ಚಿಂತೆ ಕುಟುಂಬಕ್ಕೆ ಕಾಡುತ್ತಿದೆ. ಸ್ಥಳಕ್ಕೆ ಶಾಸಕ ಆಸೀಫ್ ಸೇಠ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, 25 ಸಾವಿರ ರೂ. ಪರಿಹಾರ ನೀಡಿದ್ದು, ಸರ್ಕಾರದಿಂದ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ. ದುಡಿದು ತಿನ್ನುವವರ ಬಾಳಲ್ಲಿ ಈ ರೀತಿ ವಿಧಿ ಆಟ ಆಡಿದ್ದು ನಿಜಕ್ಕೂ ಘನಘೋರ ದುರಂತವೇ ಸರಿ‌.


Spread the love

About Laxminews 24x7

Check Also

ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ

Spread the love ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ ಜಾಂಬೋಟಿ-ಚೋರ್ಲಾ ರಸ್ತೆಯ ಹಬ್ಬನಹಟ್ಟಿ ಕ್ರಾಸ್ ಬಳಿ ಇರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ