ಗೋಕಾಕ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಸಮನ್ಸ್ ನೀಡಿರುವುದು ರಾಜಕೀಯ ಪ್ರೇರಿತ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಆರೋಪಿಸಿದ್ದಾರೆ.
ನಗರದ ಹಿಲ್ಲ್ ಗಾರ್ಡನ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡಿ ಮುಂದೆ ಸಾಕಷ್ಟು ಕೇಸ್‌ಗಳಿವೆ. ಆದರೆ ಉದ್ದೇಶಪೂರಕವಾಗಿ ರಾಹುಲ್ ಗಾಂಧಿಯವರಿಗೆ ತೊಂದರೆ ನೀಡುತ್ತಿದ್ದಾರೆ ಎಂದರು.
ಇಡಿ, ಸಿಬಿಐನಲ್ಲಿ ಅನೇಕ ಬಿಜೆಪಿ ನಾಯಕರ ಮೇಲೆ ಕೇಸ್ ಗಳಿದ್ದು, ಅವುಗಳನ್ನು ಮಾತ್ರ ಕೇಂದ್ರ ಸರ್ಕಾರ ಪರಿಗಣಿಸುತ್ತಿಲ್ಲ. ಆದರೆ ಕಾಂಗ್ರೆಸ್ ನಾಯಕರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಬಿಜೆಪಿಯವರು ಎಷ್ಟೇ ಹೆದರಿಸಲು ಪ್ರಯತ್ನ ಪಟ್ಟರೂ ನಾವು ಅದಕ್ಕೆ ಹೆದರುವುದಿಲ್ಲ. ಎಲ್ಲಾ ಸಮಸ್ಯೆಗಳಿಗೆ ಕಾನೂನಿನ ಮೂಲಕ ಹೋರಾಟ ಮಾಡುತ್ತೇವೆ ಎಂದ ತಿಳಿಸಿದರು.
ಕಾಂಗ್ರೆಸ್ ಗೆಲುವು: ವಾಯುವ್ಯ ಶಿಕ್ಷಕರ ಮತಕ್ಷೇತ್ರದಿಂದ ಪ್ರಕಾಶ್ ಹುಕ್ಕೇರಿಯವರು ಗೆಲುವು ಸಾಧಿಸಿದ್ದರಿಂದ ಕಾಂಗ್ರೆಸ್‌ಗೆ ಜಿಲ್ಲೆಯಲ್ಲಿ ಇನ್ನಷ್ಟು ಶಕ್ತಿ ಬಂದಿದೆ. ಗೆಲುವಿಗೆ ಪ್ರಕಾಶ್ ಹುಕ್ಕೇರಿಯವರ ಪ್ರಯತ್ನವೂ ಇದೆ. ಚುನಾವಣೆಯಲ್ಲಿ ದುಡ್ಡು ಹಂಚುವ ವಿಷಯಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯವರಿಗೆ ದುಡ್ಡಿನ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ ಎಂದು ಟಾಂಗ್ ನೀಡಿದರು.