ಚಿಕ್ಕಮಗಳೂರು: ದಿನದಿಂದ ದಿನಕ್ಕೆ ಹೆಚ್ಚುತ್ತಿರೋ ಕೊರೊನಾ ಪ್ರಕರಣಗಳು ಜನರನ್ನು ಕಂಗೆಡಿಸಿದೆ. ಆದರೆ ಈ ಮಧ್ಯೆ ಬೆಂಗಳೂರು, ಚಿಕ್ಕೋಡಿ, ಯಾದಗಿರಿ, ಮಲೆನಾಡು ಭಾಗ ಸೇರಿದಂತೆ ರಾಜ್ಯದ ಅನೇಕ ಕಡೆಗಳಲ್ಲಿ ಮಂಗಳವಾರ ಭಾರೀ ಮಳೆಯಾಗಿದೆ.
ಯಾದಗಿರಿ ಜಿಲ್ಲೆಯಾದ್ಯಂತ ತಡರಾತ್ರಿ ಅಧಿಕವಾಗಿ ಉತ್ತಮ ಮಳೆಯಾಗಿದ್ದು, ಜಿಲ್ಲೆಯ ರೈತರ ಮುಖದಲ್ಲಿ ಸಂತಸ ಮೂಡಿಸಿದೆ. ಮುಂಗಾರು ಆರಂಭದಿಂದಲೂ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ರೈತಾಪಿ ವರ್ಗದಲ್ಲಿ ಬಿತ್ತನೆಯ ಕಾರ್ಯ ಜೋರಾಗಿ ನಡೆಯುತ್ತಿದೆ. ಜಿಲ್ಲೆಯ ಶಹಪುರ, ಸುರಪುರ, ಗುರುಮಿಠಕಲ್ ತಾಲೂಕಿನಲ್ಲಿ ಗುಡುಗು ಸಿಡಿಲು ಸಹಿತ ಭಾರೀ ಮಳೆಯಾಗಿದೆ. ಕೆರೆ ಕಟ್ಟೆಗಳು ತುಂಬುತ್ತಿವೆ. ಆದರೆ ಜಿಲ್ಲಾ ಕೇಂದ್ರ ಯಾದಗಿರಿ ಸೇರಿದಂತೆ ವಿವಿಧ ತಾಲೂಕು ಮತ್ತು ಗ್ರಾಮ ಪಂಚಾಯಿತಿಗಳು ಇನ್ನೂ ಮಳೆಗೆ ಸಿದ್ಧವಾಗದ ಹಿನ್ನೆಲೆಯಲ್ಲಿ ತಗ್ಗು ಪ್ರದೇಶಗಳಲ್ಲಿ ಮಳೆ ನೀರು ಸಂಗ್ರಹವಾಗಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಹೆಚ್ಚಾಗಿದೆ.
2 ಗಂಟೆಯಲ್ಲಿ 7 ಇಂಚು ಮಳೆ:
ಜಿಲ್ಲೆಯ ಮಲೆನಾಡು ಭಾಗ ಹಾಗೂ ಕೊಟ್ಟಿಗೆಹಾರ ಸೇರಿದಂತೆ ಸುತ್ತಮುತ್ತ ಧಾರಾಕಾರ ಮಳೆಯಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಕೊಟ್ಟಿಗೆಹಾರ, ಬಣಕಲ್, ಜಾವಳಿ, ಬಾಳೂರು, ಚಾರ್ಮಾಡಿ ಘಾಟ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರೀ ಮಳೆಯಾಗಿದೆ. ಮಂಗಳವಾರ ಸಂಜೆ ಆರಂಭವಾದ ಮಳೆ ರಾತ್ರಿವರೆಗೂ ಒಂದೇ ಸಮನೆ ಸುರಿದಿದ್ದು, ಮಳೆ ಕಂಡು ಮಲೆನಾಡಿಗರು ಕಂಗಾಲಾಗಿದ್ದಾರೆ.
ಕೊಟ್ಟಿಗೆಹಾರ, ಬಣಕಲ್ ಸುತ್ತಮುತ್ತ ಕಳೆದ 25 ದಿನಗಳಿಂದ ಆಗಾಗ ಮಳೆ ಸುರಿಯುತ್ತಿತ್ತು. ಆದರೆ ನಿನ್ನೆ ಸಂಜೆಯಂತಹ ಮಳೆ ಈ ವರ್ಷದಲ್ಲಿ ಇದೇ ಮೊದಲು. ಅಸಾಧಾರಣವಾಗಿ ಸುರಿದ ಮಳೆ ಕಂಡು ವಾಹನ ಸವಾರರು ಮಳೆಯಲ್ಲಿ ವಾಹನಗಳನ್ನ ಓಡಿಸಲಾಗದೆ ರಸ್ತೆ ಬದಿಯಲ್ಲಿ ನಿಲ್ಲಿಸಿಕೊಂಡು ಮಳೆ ಕಡಿಮೆಯಾದ ಮಳೆ ಹೋಗಿದ್ದಾರೆ. ಚಾರ್ಮಾಡಿ ಘಾಟಿಯಲ್ಲೂ ಭಾರೀ ಮಳೆ ಸುರಿದಿದ್ದು, ವಾಹನ ಸವಾರರು ಹೋಗಲಾಗದೆ ಪರದಾಡಿದ್ದಾರೆ.
ಕಾಫಿನಾಡಿನ ಮಲೆನಾಡು ಭಾಗದಲ್ಲಿ ಈ ವರ್ಷ ಇಂತಹ ಮಳೆ ಸುರಿದಿದ್ದು ಇದೇ ಮೊದಲು. ನಿನ್ನೆ ಮಳೆ ಕಂಡು ಜನ ಭಯಗೊಂಡಿದ್ದಾರೆ. ಜಿಲ್ಲೆಯ ಬಾಳೆಹೊನ್ನೂರು, ಎನ್.ಆರ್.ಪುರ, ಕೊಪ್ಪ, ಶೃಂಗೇರಿಯಲ್ಲೂ ಆಗಾಗ ಸಾಧಾರಣ ಮಳೆ ಸುರಿದಿದೆ. ಈ ಮಧ್ಯೆ 2 ಗಂಟೆಯಲ್ಲಿ 7 ಇಂಚು ಮಳೆ ಸುರಿದಿದೆ ಎಂದು ಮಲೆನಾಡಿಗರು ಅಂದಾಜಿಸಿದ್ದಾರೆ.
ಇಷ್ಟು ದಿನ ಮಲೆನಾಡಿಗರು ಮಳೆ ಬಂದರೆ ಒಂದು ರೀತಿ ಭಯಪಡುತ್ತಿದ್ದರು. ಆದರೆ ಈಗ ಮಳೆ ಜೊತೆ ಪ್ರವಾಸಿಗರನ್ನು ಕಂಡು ಕೊರೊನಾ ಭಯದಿಂದ ಬದುಕುವಂತಾಗಿದೆ. ತಂಪಿನ ವಾತಾವರಣಲ್ಲಿ ಕೊರೊನಾ ವೈರಸ್ ಹೆಚ್ಚು ದಿನಗಳ ಕಾಲ ಬದುಕುತ್ತೆ ಎಂದು ವರದಿಗಳು ಹೇಳಿವೆ. ಈ ಮಧ್ಯೆ ರಾಜ್ಯಾದ್ಯಂತ ದಿನೇ-ದಿನೇ ಕೊರೊನಾ ಹೆಚ್ಚುತ್ತಿದ್ದು, ಮೂಡಿಗೆರೆಯ ಕೊಟ್ಟಿಗೆಹಾರ, ಬಲ್ಲಳರಾಯನದುರ್ಗ, ದೇವರಮನೆಗುಡ್ಡಕ್ಕೆ ರಾಜ್ಯಾದ್ಯಂತ ಎಗ್ಗಿಲ್ಲದೆ ಪ್ರವಾಸಿಗರು ಬರುತ್ತಿದ್ದಾರೆ. ಪ್ರವಾಹದಂತೆ ಬರುತ್ತಿರುವ ಪ್ರವಾಸಿಗರನ್ನ ಕಂಡ ಕೊಟ್ಟಿಗೆಹಾರದ ಜನ ಸುಂಕಸಾಲೆ ಗ್ರಾಮ ಪಂಚಾಯಿತಿಗೆ ಪ್ರವಾಸಿಗರು ಬರದಂತೆ ಕ್ರಮಕೈಗೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ.