ವಿಜಯಪುರ: ತ್ರೇತಾಯುಗದಲ್ಲಿ ತಾಯಿ ಬಯಕೆಯಂತೆ ಶ್ರೀರಾಮ ಹದಿನಾಲ್ಕು ವರ್ಷ ವನವಾಸ ಅನುಭವಿಸಿದ್ದನ್ನು ಕೇಳಿದ್ದೇವೆ. ಆದರೆ, ತಾಳಿಕೋಟೆ ತಾಲೂಕಿನ ಸಾಸನೂರ ಗ್ರಾಮದಲ್ಲಿ ವೃದ್ಧೆಯೊಬ್ಬರು ತನ್ನ ಮಗನ ಸಾವಿನಿಂದ ಬೇಸತ್ತು ಕಳೆದ ಹದಿನಾಲ್ಕು ವರ್ಷದಿಂದ ಊಟ ಮಾಡದೇ ಕೇವಲ ಚಹಾ ಕುಡಿದು ಜೀವನ ಸಾಗಿಸುತ್ತಿದ್ದಾರೆ!
ಹೌದು, ಆ ಮಹಾತಾಯಿಯೇ ಶಾಂತಮ್ಮ ಬಿರಾದಾರ(75). ಗ್ರಾಮದಲ್ಲಿ ‘ಚಹಾ ಅಜ್ಜಿ’ ಎಂದೇ ಗುರುತಿಸಿ ಕೊಂಡಿರುವ ಇವರು ದಿನಕ್ಕೆ ಮೂರ್ನಾಲ್ಕು ಬಾರಿ ಚಹಾ ಕುಡಿಯುತ್ತಾರಷ್ಟೆ.
ಊಟ ಬಿಟ್ಟದ್ದು ಏಕೆ?: ಶಾಂತಮ್ಮ ಬಸವಂತರಾಯ ಬಿರಾದಾರ ದಂಪತಿಗೆ ಮೂವರು ಪುತ್ರಿಯರು, ಒಬ್ಬನೇ ಪುತ್ರ. ಹೆಣ್ಣು ಮಕ್ಕಳಿಗೆ ಮದುವೆಯಾಗಿದೆ. ಶಾಂತಮ್ಮರ ಪತಿ ಮೃತಪಟ್ಟಿದ್ದಾರೆ. ಪುತ್ರ ಶಿವನಗೌಡ ಬಿರಾದಾರ ಅನಾರೋಗ್ಯಕ್ಕೀಡಾಗಿ ಮೃತಪಟ್ಟರು. ಜೀವಕ್ಕೆ ಜೀವವಾಗಿದ್ದ ಮಗನೇ ಇಲ್ಲವಾದ ಮೇಲೆ ಬದುಕಾದರೂ ಏಕೆಂದು ತಾಯಿ ತೀವ್ರವಾಗಿ ನೊಂದುಕೊಂಡರು. ಮಗನ ಅಂತಿಮ ಕ್ರಿಯಾದಿಗಳು ಮುಗಿದ ಬಳಿಕ ಊಟ ಮಾಡಲು ಕುಳಿತ ಶಾಂತಮ್ಮಗೆ, ಅನ್ನ ಬಾಯಿಗೆ ಹಾಕಿಕೊಳ್ಳುತ್ತಿದ್ದಂತೆ ಪುತ್ರನ ನೆನಪಾಗಿ ಕಣ್ಣಲ್ಲಿ ನೀರು ಜಿನುಗಿ, ಬಿಕ್ಕಳಿಕೆ ಶುರುವಾಯಿತಂತೆ. ಅಂದಿನಿಂದ ಶಾಂತಮ್ಮ ಊಟ ಮಾಡಲೇ ಇಲ್ಲ. ವಿಷಯ ತಿಳಿದ ಸಂಬಂಧಿಕರು ಆಸ್ಪತ್ರೆಗೆ ಕರೆದೊಯ್ದು ತೋರಿಸಿದ್ದಾರೆ. ಆರೋಗ್ಯದಲ್ಲಿ ಏನೂ ತೊಂದರೆಯಿಲ್ಲ ಎಂದ ವೈದ್ಯರು, ಊಟ ಮಾಡುವಂತೆ ಸಲಹೆ ನೀಡಿದ್ದರು. ಆದರೂ ಅವರು ಊಟ ಮಾಡಿಲ್ಲ. ಅಂದಿನಿಂದ ಇಂದಿನವರೆಗೂ ಈ ಮಹಾತಾಯಿ, ಹಿರಿಯರಿಗೆ ‘ಚಹಾ ಅಮ್ಮ’, ಕಿರಿಯರಿಗೆ ‘ಚಹಾ ಅಜ್ಜಿ’ ಆಗಿದ್ದಾರೆ. ಸದ್ಯ ಶಾಂತಮ್ಮ ಗ್ರಾಮದ ಮಠವೊಂದರ ಪುಟ್ಟ ಮನೆಯಲ್ಲಿದ್ದಾರೆ. ವೈದ್ಯ ಲೋಕಕ್ಕೂ ಇವರು ಸವಾಲಾಗಿದ್ದಾರೆ.