ಬೆಳಗಾವಿ/ಚಿಕ್ಕೋಡಿ: ರಾಜ್ಯದ ಚುಕ್ಕಾಣಿ ಹಿಡಿಯಲು ನಾನು ಸಬಲನಿದ್ದೇನೆ ಎಂದು ಹೇಳುವ ಮೂಲಕ ಶಾಸಕ ಉಮೇಶ್ ಕತ್ತಿ ಮತ್ತೆ ಮುಖ್ಯಮಂತ್ರಿ ಆಗುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಹುಕ್ಕೇರಿ ಪಟ್ಟಣದಲ್ಲಿ ಕೊರೊನಾ ವಾರಿಯರ್ಸ್ ಗೆ ಕಿಟ್ ವಿತರಣೆ ಸಮಾರಂಭದಲ್ಲಿ ಶಾಸಕ ಉಮೇಶ್ ಕತ್ತಿ ಭಾಗಿಯಾಗಿದ್ದರು. ಸಮಾರಂಭದ ವೇದಿಕೆಯಲ್ಲಿಯೇ ಸಿಎಂ ಆಗೋ ಆಸೆಯನ್ನು ಹೊರ ಹಾಕಿದ್ದಾರೆ. ಒಟ್ಟು ಎಂಟು ಬಾರಿ ಶಾಸಕನಾಗಿದ್ದೇನೆ. ಹಾಗೆ ರಾಜ್ಯದ ಚುಕ್ಕಾಣಿ ಹಿಡಿಯಲು ನಾನು ಸಬಲನಿದ್ದೇನೆ. ಉತ್ತರ ಕರ್ನಾಟಕದ ಸುಪುತ್ರ ರಾಜ್ಯದ ಮುಖ್ಯಮಂತ್ರಿ ಆಗಿ ಬರಲಿ ಎನ್ನುವ ಹಾರೈಕೆ ನಿಮ್ಮದಾಗಿರಲಿ ಎಂದು ಹೇಳಿದರು.
ವಿಶ್ವರಾಜ ಕತ್ತಿ ಟ್ರಸ್ಟ್ ವತಿಯಿಂದ ಆಶಾ ಕಾರ್ಯಕರ್ತೆಯರಿಗೆ ಕಿಟ್ ವಿತರಿಸಲಾಯಿತು. ಈ ಹಿಂದೆಯೂ ಹಲವು ಬಾರಿ ಉಮೇಶ್ ಕತ್ತಿ ಸಿಎಂ ಪಟ್ಟಕ್ಕೇರುವ ಇಂಗಿತ ವ್ಯಕ್ತಪಡಿಸಿದ್ದರು. ಸಂಪುಟದಲ್ಲಿ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಮುರುಗೇಶ್ ನಿರಾಣಿ ಜೊತೆ ಸೇರಿ ಉತ್ತರ ಕರ್ನಾಟಕ ಭಾಗದ ಶಾಸಕರ ಬಣ ರಚಿಸುತ್ತಿದ್ದಾರೆ ಎನ್ನಲಾಗುತ್ತಿದೆ.