ಗದಗ: ಬಡ ಜನರಿಗೆ ಅನುಕೂಲವಾಗಲಿ ಎಂದು ಸರ್ಕಾರ ಅನ್ನಭಾಗ್ಯ ಯೋಜನೆ ಮೂಲಕ ಪಡಿತರ ಚೀಟಿಯುಳ್ಳವರಿಗೆ ನೀಡುತ್ತಿದ್ದ ಅಕ್ಕಿ ದಾರಿ ತಪ್ಪಿ ಖದೀಮರ ಪಾಲಾಗುತ್ತಿರೋದು ಬೆಳಕಿಗೆ ಬಂದಿದೆ.
ಜಿಲ್ಲೆಯ ಮುಂಡರಗಿ ತಾಲೂಕಿನ ಹಿರೇವಡ್ಡಟ್ಟಿ ಗ್ರಾಮದಲ್ಲಿ ಸೈಬರ್ ಠಾಣೆಯ ಇನ್ಸ್‌ಪೆಕ್ಟರ್ ಟಿ.ಮಹಾಂತೇಶ್ ಮತ್ತು ಅವರ ತಂಡ ಕಾರ್ಯಾಚರಣೆ ನಡೆಸಿತ್ತು. ಗ್ರಾಮದ ಬಿಜೆಪಿ ಮುಖಂಡ ಮತ್ತು ಗುತ್ತಿಗೆದಾರ ಆನಂದ್ ನಾಗರಳ್ಳಿ, ಕಾಂಗ್ರೆಸ್ ಮುಖಂಡ ಮಹಬೂಬಸಾಬ್ ಮುಂಡರಗಿ ಹಾಗೂ ಷಣ್ಮುಖಪ್ಪ ಎಂಬುವವರು ಮನೆ ಮೇಲೆ ದಾಳಿ ಮಾಡಲಾಗಿತ್ತು. ಈ ವೇಳೆ ಮನೆ ಹಾಗೂ ಅಂಗಡಿಗಳಿಂದ ಸುಮಾರು 60 ಕ್ವಿಂಟಾಲ್ ಅಕ್ಕಿ ಪತ್ತೆಯಾಗಿದ್ದು, ಜಪ್ತಿ ಮಾಡಲಾಗಿದೆ.
ಇವರು ಗ್ರಾಮದ ವಿವಿಧೆಡೆಯಿಂದ ಅಕ್ರಮವಾಗಿ ಅಕ್ಕಿಯನ್ನು ಖರೀದಿಸಿ ತಮ್ಮ ಮನೆ ಮತ್ತು ಅಂಗಡಿಗಳಲ್ಲಿ ಸಂಗ್ರಹಿಸಿ ಇಡುತ್ತಿದ್ದರು. ಅದನ್ನು ಗದಗ ಮೂಲದ ವ್ಯಕ್ತಿಗೆ ಅಧಿಕ ಬೆಲೆಗೆ ಮಾರುತ್ತಿದ್ದರು ಅಂತಾ ಹೇಳಲಾಗಿದೆ. ಇನ್ನು ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಮುಂಡರಗಿ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.