ಬಾಲಿವುಡ್ ನಟ ಅಕ್ಷಯ್ ಕುಮಾರ್ ನಟನೆಯ ಬಹುನಿರೀಕ್ಷೆಯ ಬೆಲ್ ಸಿನಿಮಾ ಬಿಡುಗಡೆ ಕಗ್ಗಂಟಾಗಿದೆ. ಚಿತ್ರದ ನಿರ್ಮಾಪಕರು ಮತ್ತು ಮಲಿಫ್ಲೆಕ್ಸ್ ನಡುವೆ ಜಟಾಪಟಿ ಸುರುವಾಗಿದೆ.
ಇತ್ತೀಚಿಗಷ್ಟೆ ಸಿನಿಮಾತಂಡ ಅಂದುಕೊಂಡಂತೆ ಜುಲೈ 27ಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವುದಾಗಿ ಅನೌನ್ಸ್ ಮಾಡಿತ್ತು. ಬಳಿಕ ಒಟಿಟಿಯಲ್ಲಿ ಸಿನಿಮಾ ಬರಲಿ ಎಂದು ಚಿತ್ರತಂಡ ಹೇಳಿತ್ತು. ವಿಜಯ್ ನಟನೆಯ ಮಾಸ್ಟರ್ ಸಿನಿಮಾ ಕೂಡ ರಿಲೀಸ್ ಆಗಿ ಕೆಲವೇ ದಿನಗಳಲ್ಲಿ ಒಟಿಟಿಯಲ್ಲಿ ಬಿಡುಗಡೆಯಾಗಿತ್ತು. ಅದೇ ಮಾರ್ಗವನ್ನು ಅಕ್ಷಯ್ ಕುಮಾರ್ ನಟನೆಯ ಬೆಲ್ ಬಾಟಮ್ ಸಿನಿಮಾತಂಡ ಕೂಡ ಅನುಸರಿಸಲು ಮುಂದಾಗಿದೆ.
ಆದರೆ ಚಿತ್ರತಂಡದ ಈ ನಿರ್ಧಾರಕ್ಕೆ ಮಲ್ಟಿಫ್ಲೆಕ್ಸ್ ವಿರೋಧ ವ್ಯಕ್ತಪಡಿಸಿದೆ. ಒಂದು ವೇಳೆ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಒಂದೆರಡು ವಾರಗಳಲ್ಲೇ ಒಟಿಟಿಯಲ್ಲಿ ಬಿಡುಗಡೆಯಾಗುವುದಾದರೆ ಸಿನಿಮಾವನ್ನು ಮಲ್ಟಿಫ್ಲೆಕ್ಸ್ ಗಳಲ್ಲಿ ಬಿಡುಗಡೆ ಮಾಡಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪ್ರದರ್ಶಕರೊಬ್ಬರು, “ನಾವು ಬಿಡುಗಡೆಯ ನಿಯಮಗಳಿಗೆ ಸಂಬಂಧಿಸಿದಂತೆ ಬೆಲ್ ಬಾಟಮ್ ತಂಡದ ಜೊತೆ ಮಾತನಾಡಿದ್ದೇವೆ. ನಿರ್ಮಾಪಕರು ತುಂಬಾ ರಿಸ್ಕ್ ತೆಗೆದುಕೊಳ್ಳುತ್ತಿದ್ದಾರೆ ಎನ್ನುವುದು ಅರ್ಥವಾಗುತ್ತೆ. ಆದರೆ ಚಿತ್ರಮಂದಿರಗಳು ಸಂಕಷ್ಟದಲ್ಲಿವೆ ಎಂದು ಅವರು ತಿಳಿದುಕೊಳ್ಳಬೇಕು” ಎಂದಿದ್ದಾರೆ.
“ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ 2 ವಾರದಲ್ಲೇ ಒಟಿಟಿಯಲ್ಲಿ ರಿಲೀಸ್ ಆಗುವುದಾದರೆ ಜನ ಚಿತ್ರಮಂದಿರಕ್ಕೆ ಯಾಕೆ ಬಂದು ನೋಡುತ್ತಾರೆ?” ಎಂದು ಪ್ರಶ್ನೆ ಮಾಡಿದ್ದಾರೆ.
ಬಾಲಿವುಡ್ ಟ್ರೇಡ್ ಪ್ರಕಾರ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಮುಕ್ತವಾಗಿದ್ದೂ, ಮಲ್ಟಿಫೆಕ್ಸ್ ಗಳು ಚಿತ್ರತಂಡದ ನಿರ್ಧಾರ ಒಪ್ಪುವುದಿಲ್ಲ ಎಂದು ಹೇಳುತ್ತಿದ್ದಾರೆ. ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ 2 ವಾರದಲ್ಲೇ ಒಟಿಟಿಯಲ್ಲಿ ಬಿಡುಗಡೆಯಾಗುವ ನಿಲುವನ್ನು ವಿರೋಧಿಸುತ್ತಿವೆ. ಕನಿಷ್ಠ 28 ದಿನಗಳ ಅಂತರ ಬೇಕೆಂದು ಪಟ್ಟು ಹಿಡಿದಿವೆ.
ಮಲ್ಟಿಫ್ಲೆಕ್ಸ್ ನಿರ್ಧಾರಕ್ಕೆ ಚಿತ್ರತಂಡ ಮಣಿಯುತ್ತಾ ಅಥವಾ ಬೆಲ್ ಬಾಟಮ್ ಸಿನಿಮಾವನ್ನು ತಮ್ಮ ಪರದೆ ಮೇಲೆ ಬಿಡುಗಡೆ ಮಾಡದಿರಲು ನಿರ್ಧರಿಸುತ್ತಾರಾ ಎಂದು ಕಾದುನೋಡಬೇಕು.ಕೊರೊನಾ 2ನೇ ಅಲೆ ಬಳಿಕ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗುತ್ತಿರುವ ಬಿಗ್ ಬಜೆಟ್ ಸಿನಿಮಾ ಬೆಲ್ ಬಾಟಮ್. ಚಿತ್ರದಲ್ಲಿ ಅಕ್ಷಯ್ ಕುಮಾರ್ ರೆಟ್ರೋ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕಿಯರಾಗಿ ವಾಣಿ ಕಪೂರ್, ಹುಮಾ ಖರೇಶಿ, ಲಾರಾ ದತ್ತ ಕಾಣಿಸಿಕೊಂಡಿದ್ದಾರೆ. ಸದ್ಯ ಚಿತ್ರತಂಡ ಜುಲೈ 27ಕ್ಕೆ ಬಿಡುಗಡೆ ಮಾಡಲು ನಿರ್ಧರಿಸಿದ್ದು 2 ವಾರದ ಬಳಿಕ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆ ಮಾಡಲು ಸಿದ್ಧವಾಗಿದೆ.