ಕೊರೊನಾ ಎಫೆಕ್ಟ್ ನಿಂದ ಸಿನಿಮಾ ರಿಲೀಸ್ ಆಗ್ತಿಲ್ಲ. ಚಿತ್ರಮಂದಿರಕ್ಕೆ ಬಂದು ಸಿನಿಮಾ ಕಣ್ತುಂಬಿಕೊಳ್ಳೋ ಭಾಗ್ಯ ಸಿನಿರಸಿಕರ ಪಾಲಿಗೆ ಸದ್ಯಕ್ಕಿಲ್ಲ. ಹಾಗಂತ ನಮ್ಮ ಸಿನಿ ಪ್ರೇಮಿಗಳು ಸಿನಿಮಾ ನೋಡೋದು ಬಿಟ್ಟಿಲ್ಲ. ಮನೆಯಲ್ಲಿದ್ದುಕೊಂಡೇ ಒಟಿಟಿಯಲ್ಲಿ ಕನ್ನಡ ಸಿನಿಮಾಗಳ ಮೇಲೆ ಅಪಾರ ಪ್ರೀತಿ ತೋರುತ್ತಿದ್ದಾರೆ.
ನಿಜ ಹೇಳ್ಬೇಕು ಅಂದ್ರೆ ಥಿಯೇಟರ್ ಅಂಗಳದಲ್ಲೂ ಸಿಗದ ಅದ್ಭುತ ರೆಸ್ಪಾನ್ಸ್ ಒಟಿಟಿ ಪ್ಲಾಟ್ ಫಾರ್ಮ್ ನಲ್ಲಿ ಕನ್ನಡ ಸಿನಿಮಾಗಳಿಗೆ ಸಿಕ್ತಿದೆ. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಅಂದ್ರೆ ‘ನಮ್ ಗಣಿ ಬಿ.ಕಾಂ ಪಾಸ್’ ಸಿನಿಮಾ. ಕಳೆದ ವರ್ಷ ನವೆಂಬರ್ ತಿಂಗಳಿನಲ್ಲಿ ‘ನಮ್ ಗಣಿ ಬಿ.ಕಾಂ ಪಾಸ್’ ಚಿತ್ರ ಚಿತ್ರಮಂದಿರಕ್ಕೆ ಲಗ್ಗೆ ಇಟ್ಟಿತ್ತು. ಒಳ್ಳೆಯ ರೆಸ್ಪಾನ್ಸ್ ಪಡೆದುಕೊಂಡಿದ್ದ ಚಿತ್ರ ಸುಮಾರು 57 ದಿನಗಳ ಕಾಲ ಚಿತ್ರಮಂದಿರದ ಅಂಗಳದಲ್ಲಿತ್ತು.
ಚಿತ್ರಕ್ಕೆ ಸಿಕ್ಕ ಪಾಸಿಟಿವ್ ರೆಸ್ಪಾನ್ಸ್ ನಿಂದ ಸಂತಸಗೊಂಡಿದ್ದ ಚಿತ್ರತಂಡ ಏಪ್ರಿಲ್ ತಿಂಗಳಲ್ಲಿ ಅಮೇಜಾನ್ ಪ್ರೈಮ್ ನಲ್ಲಿ ಸಿನಿಮಾವನ್ನ ಬಿಡುಗಡೆ ಮಾಡಿತ್ತು. ಚಿತ್ರತಂಡ ಊಹಿಸದ ರೀತಿಯಲ್ಲಿ ಅಮೇಜಾನ್ ಪ್ರೈಮ್ ನಲ್ಲಿ ಚಿತ್ರಕ್ಕೆ ದೊಡ್ಡ ಮಟ್ಟದ ಯಶ್ಸಸ್ಸು ಸಿಕ್ಕಿದೆ. ಇಲ್ಲಿವರೆಗೆ ಒಂದು ಮಿಲಿಯನ್ ವ್ಯೂ ಚಿತ್ರಕ್ಕೆ ಸಿಕ್ಕಿದೆ. ಅಷ್ಟೇ ಅಲ್ಲ ಸೋಶಿಯಲ್ ಮೀಡಿಯಾದಲ್ಲಿ ಚಿತ್ರತಂಡದವ್ರನ್ನು ಸಂಪರ್ಕಿಸಿ ಚಿತ್ರದ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದು ಮತ್ತೊಂದು ಸಿನಿಮಾ ಮಾಡುವಂತೆ ಉತ್ತೇಜನ ಕೂಡ ನೀಡ್ತಿದ್ದಾರೆ ಎಂದು ಚಿತ್ರತಂಡ ಖುಷಿಯನ್ನು ಹಂಚಿಕೊಂಡಿದೆ.
ಚಿತ್ರದ ನಾಯಕ ಕಂ ನಿರ್ದೇಶಕ ಅಭಿಷೇಕ್ ಶೆಟ್ಟಿ ಮೊದಲ ಚಿತ್ರ ಇದಾಗಿದ್ದು, ಮೊದಲ ಪ್ರಯತ್ನದಲ್ಲೇ ಫಸ್ಟ್ ಕ್ಲಾಸ್ ನಲ್ಲಿ ಪಾಸ್ ಆಗಿದ್ದಾರೆ. ಚಿತ್ರದಲ್ಲಿ ನಾಯಕಿಯಾಗಿ ಐಶಾನಿ ಶೆಟ್ಟಿ ನಟಿಸಿದ್ದು, ಪಲ್ಲವಿ ಗೌಡ, ರಚನಾ ದಶರಥ, ಸುಚೇಂದ್ರ ಪ್ರಸಾಧ್, ಸುಧಾ ಬೆಳವಾಡಿ ಚಿತ್ರದ ತಾರಾಬಳಗದಲ್ಲಿದ್ದಾರೆ. ವಿಕಾಸ್ ವಸಿಷ್ಠ ಸಂಗೀತ ನಿರ್ದೇಶನ ಚಿತ್ರಕ್ಕಿದ್ದು, ಬೃಂದಾವನ್ ಎಂಟರ್ ಪ್ರೈಸಸ್ ಬ್ಯಾನರ್ ನಡಿ ನಿರ್ಮಾಣವಾಗಿರೋ ಈ ಚಿತ್ರಕ್ಕೆ ನಾಗೇಶ್ ಕುಮಾರ್ ಯು.ಎಸ್ ಬಂಡವಾಳ ಹೂಡಿದ್ದಾರೆ.
ಬಿ.ಕಾಂ ಪಾಸ್ ಆದ ಹುಡುಗ ಕೆಲಸ ಸಿಗದೇ ಇದ್ದಾಗ ಯಾವೆಲ್ಲ ಪಡಿಪಾಟಲು ಪಡುತ್ತಾನೆ. ಆತನ ಜೀವನನದಲ್ಲಿ ಏನೇನಾಗುತ್ತೆ ಅನ್ನೋದನ್ನು ಚಿತ್ರದಲ್ಲಿ ಕಟ್ಟಿಕೊಡಲಾಗಿದ್ದು, ಹಾಸ್ಯದ ಹೂರಣದ ಜೊತೆ ಭಾವನಾತ್ಮಕ ಅಂಶಗಳು ಚಿತ್ರದಲ್ಲಿದೆ. ಒಟ್ಟಿನಲ್ಲಿ ಒಳ್ಳೆಯ ಸಿನಿಮಾಗಳು ಸೋಲೋದಿಲ್ಲ ಎನ್ನೋದಕ್ಕೆ ‘ನಮ್ ಗಣಿ ಬಿ.ಕಾಂ ಪಾಸ್’ ಚಿತ್ರ ಬೆಸ್ಟ್ ಉದಾಹರಣೆ.