ಚಿಕ್ಕೋಡಿ(ಮಾ.11): ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪರ ಈಗಾಗಲೇ ಬಿಜೆಪಿ ಶಾಸಕರು ಸಚಿವರುಗಳು ಹಾಗೂ ಜೆಡಿಎಸ್ ಬ್ಯಾಟಿಂಗ್ ಶುರು ಮಾಡಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿಯೇ ರಮೇಶ್ ಜಾರಕಿಹೋಳಿ ಪರ ಮಾತನಾಡಿದ ಬೆನ್ನಲ್ಲೇ, ಈಗ ಗೋಕಾಕ ಕ್ಷೇತ್ರದಲ್ಲಿ ರಮೇಶ್ ಅವರ ರಾಜಕೀಯ ವಿರೋಧಿ ಅಂತಲೇ ಗುರುತಿಸಿಕೊಂಡಿರುವ ಜೆಡಿಎಸ್ ಮುಖಂಡ ಅಶೋಕ್ ಪೂಜಾರಿ ಕೂಡ ರಮೇಶ್ ಜಾರಕಿಹೋಳಿ ಬೆಂಬಲಕ್ಕೆ ನಿಂತಿದ್ದು ಸಿ. ಡಿ. ನಕಲಿ ಎಂದಾದರೆ ಅವರಿಗೆ ಮತ್ತೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಅಶೋಕ್ ಪೂಜಾರಿ, ರಮೇಶ್ ಜಾರಕಿಹೊಳಿ ವಿರುದ್ಧದ ಸಿ. ಡಿ. ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಸಿ. ಡಿ. ನಕಲಿ ಎನ್ನುವುದಾದರೆ ಅವರನ್ನ ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ನಕಲಿ ಸಿ. ಡಿ.ಯಾಗಿದ್ದರೆ ಯಾರು ಅದಕ್ಕೆ ಬಲಿಪಶು ಆಗುವುದು ಬೇಡ. ರಾಜಕಾರಣವೇ ಬೇರೆ, ಇಂತಹ ವಿಷಯಗಳೆ ಬೇರೆ. ಸಿ.ಡಿ. ಬಂದಾಗ ಅವರು ರಾಜೀನಾಮೆ ನೀಡಬೇಕು ಎಂದು ನಾನು ಮೊದಲು ಗೋಕಾಕ್ ನಲ್ಲಿ ಪ್ರತಿಭಟನೆ ನಡೆಸಿದ್ದೆ. ಆದ್ರೆ ಅವರು ಸ್ವತಃ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದಾರೆ. ಈಗ ರಮೇಶ್ ಜಾರಕಿಹೊಳಿ ಹಾಗೂ ಅವರ ಸಹೋದರ ಬಾಲಚಂದ್ರ ಜಾರಕಿಹೊಳಿ ಇದೊಂದು ನಕಲಿ ಸಿ.ಡಿ ಎಂದು ಪದೇ ಪದೇ ಹೇಳುತ್ತಿದ್ದಾರೆ. ಇದೊಂದು ಷಡ್ಯಂತ್ರ ಎನ್ನುವುದಾದರೆ ಕೂಡಲೇ ತನಿಖೆ ಆಗಬೇಕು ಎಂದಿದ್ದಾರೆ.