ಚಿಕ್ಕಬಳ್ಳಾಪುರ – ಜಿಲ್ಲೆಯ ಗುಡಿಬಂಡೆಯ ಹಿರೇನಾಗವಲ್ಲಿ ಕ್ವಾರಿಯಲ್ಲಿ ಸಂಭವಿಸಿದ ಸ್ಪೋಟ ಪ್ರಕರಣಕ್ಕೆ ಸಂಬಂದಿಸಿದಂತೆ ಗುಡಿಬಂಡೆ ಪೊಲೀಸ್ ಠಾಣೆ ಪಿಎಸ್ ಐ ಆರ್ ಗೋಪಾಲ ರೆಡ್ಡಿ ಅಮಾನತುಗೊಳಿಸಲಾಗಿದೆ.
ಗೃಹ ಇಲಾಖೆಯಿಂದ ಈ ಕುರಿತು ಆದೇಶ ಹೊರಬಿದ್ದಿದೆ. ಕ್ವಾರಿಯ ಮೇಲೆ ದಾಳಿ ನಡೆದ ನಂತರ ಆರೋಪಿಗಳನ್ನು ದಸ್ತಗಿರಿ ಮಾಡಲು ಪಿಎಸ್ಐ ಗೋಪಾಲ ರೆಡ್ಡಿ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ. ಪ್ರಕರಣ ದಾಖಲಿಸಿದ ಬಗ್ಗೆ ಪೊಲೀಸ್ ಐಟಿ ತಂತ್ರಾಂಶದಲ್ಲಿ ನಮೂದಿಸಿಲ್ಲ. ಪ್ರಕರಣದ ತನಿಖೆ ನಡೆಸದೇ ಫೆ. ೨೧ ಮತ್ತು ೨೨ ರಂದು ರಜೆ ಮೇಲೆ ತೆರಳಿರುತ್ತಾರೆ ಎನ್ನುವ ಆರೋಪವನ್ನು ಅವರ ಮೇಲೆ ಹೊರಿಸಲಾಗಿದೆ.
ಅರೋಪಿಗಳನ್ನು ದಸ್ತಗಿರಿ ಮಾಡದೇ ಇದ್ದಿದ್ದರಿಂದ ಈ ಸ್ಪೋಟ ಸಂಭವಿಸಿದೆ. ಆರೋಪಿ ನಾಗರಾಜ ಸೂಚನೆ ಮೇರೆಗೆ ಅಕ್ಕಿ ಚೀಲದಲ್ಲಿ ಸ್ಪೋಟಕ ಸಾಗಿಸಲಾಗುತ್ತಿತ್ತು. ಆ ಸಂದರ್ಭದಲ್ಲಿ ಈ ಸ್ಫೋಟ ಸಂಭವಿಸಿ ೬ ಜನ ಸಾವನ್ನಪ್ಪಿದ್ದಾರೆ. ಆರೋಪಿಗಳನ್ನು ಪತ್ತೆ ಮಾಡುವಂತೆ ಅಧೀನ ಸಿಬ್ಬಂದಿಗೂ ಸೂಚನೆ ನೀಡಿಲ್ಲ. ಆರೋಪಿಗಳನ್ನು ಸೂಕ್ತ ಸಂದರ್ಭದಲ್ಲಿ ದಸ್ತಗಿರಿ ಮಾಡಿದ್ದರೆ ಈ ಸ್ಫೋಟ ಪ್ರಕರಣ ಸಂಭವಿಸುತ್ತಿರಲಿಲ್ಲ ಎಂದು ತಿಳಿಸಲಾಗಿದೆ.
ಕರ್ತವ್ಯ ನಿರ್ವಹಣೆಯಲ್ಲಿ ಗೋಪಾಲ ರೆಡ್ಡಿ ಅತೀವ ನಿರ್ಲಕ್ಷ ಮತ್ತು ಬೇಜವಾಬ್ದಾರಿತನ ತೋರಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ಗೋಪಾಲರೆಡ್ಡಿ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿಸಲಾಗಿದೆ.
Laxmi News 24×7