ಬೆಂಗಳೂರು: ಇನ್ನೇನು ಕೆಲವೇ ಕೆಲವು ದಿನಗಳು ಮಾತ್ರ. ಮಹಾಮಾರಿ ಕೊರೋನಾಗೆ ಲಸಿಕೆ ಸಿಗಲಿದೆ. ಈ ಹಿನ್ನೆಲೆಯಲ್ಲಿ ಈಗ ಅದನ್ನು ಹೇಗೆ ಜನರಿಗೆ ಮುಟ್ಟಿಸಬೇಕು ಅನ್ನೋದರ ಬಗ್ಗೆ ಗಂಭೀರ ಚಿಂತನೆಗಳು ನಡೆದು ಡ್ರೈ ರನ್ ಕೂಡ ನಡೆಯುತ್ತಿದೆ. ಇಂದು ಎರಡನೇ ಹಂತದ ವ್ಯಾಕ್ಸಿನ್ ಡ್ರೈ ರನ್ ರಾಜ್ಯದಲ್ಲಿ ನಡೆಯಲಿದೆ. ಜನವರಿ 2ರಂದು ಬೆಂಗಳೂರು ಸೇರಿದಂತೆ ರಾಜ್ಯದ ಐದು ಕಡೆಗಳಲ್ಲಿ ವ್ಯಾಕ್ಸಿನ್ ಡ್ರೈ ರನ್ ನಡೆಸಲಾಗಿತ್ತು. ಇದು ಯಶಸ್ವಿಯಾದ ಹಿನ್ನೆಲೆ ಈಗ ಇಡೀ ರಾಜ್ಯದಲ್ಲಿ ವ್ಯಾಕ್ಸಿನ್ ಡ್ರೈ ರನ್ ನಡೆಸೋಕೆ ಸರ್ಕಾರ ಮುಂದಾಗಿದೆ. ರಾಜ್ಯದಲ್ಲಿ ಒಟ್ಟು 263 ಕಡೆ ಇಂದು ಅಂದ್ರೆ ಜನವರಿ 8ರಂದು ಡ್ರೈ ರನ್ ನಡೆಯಲಿದೆ. ಎಲ್ಲಾ ಜಿಲ್ಲಾಸ್ಪತ್ರೆ, ತಾಲ್ಲೂಕು ಆಸ್ಪತ್ರೆ, ವೈದ್ಯಕೀಯ ಕಾಲೇಜುಗಳ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಡ್ರೈ ರನ್ ನಡೆಯಲಿದೆ. ಮೊದಲಿನಂತೆ, ಪ್ರತೀ ಕೇಂದ್ರದಲ್ಲೂ 25 ಸ್ವಯಂಸೇವಕರ ಮೇಲೆ ಪ್ರಯೋಗದ ಡ್ರೈರನ್ ಆಗಲಿದೆ.
ಇನ್ನು ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಸಚಿವ ಸುಧಾಕರ್, ಜನವರಿ 8 ರಂದು ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಮೂರು ಕಡೆ ಲಸಿಕೆ ವಿತರಣೆಯ ತಾಲೀಮು ನಡೆಯಬೇಕಿತ್ತು. ಆದರೆ ನಮ್ಮ ರಾಜ್ಯದಲ್ಲಿ ಪ್ರತಿ ಜಿಲ್ಲೆಯಲ್ಲಿ ಏಳು ವ್ಯವಸ್ಥೆಯಲ್ಲಿ ತಯಾರಿ ಮಾಡಿಕೊಂಡು 263 ಪ್ರದೇಶಗಳಲ್ಲಿ ಲಸಿಕೆಯ ವಿತರಣೆ ನಡೆಯಲಿದೆ. 24 ಜಿಲ್ಲಾಸ್ಪತ್ರೆ, 20 ಮೆಡಿಕಲ್ ಕಾಲೇಜು, 43 ತಾಲೂಕು ಆಸ್ಪತ್ರೆ, 31 ಸಮುದಾಯ ಆರೋಗ್ಯ ಕೇಂದ್ರ, 87 ಪ್ರಾಥಮಿಕ ಆರೋಗ್ಯ ಕೇಂದ್ರ, 30 ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, 28 ಖಾಸಗಿ ಆರೋಗ್ಯ ಕೇಂದ್ರಗಳಲ್ಲಿ ತಾಲೀಮು ನಡೆಯಲಿದೆ ಎಂದು ಮಾಹಿತಿ ನೀಡಿದರು.
Laxmi News 24×7