ಹಿರಿಯೂರು ,- ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಿಸಲಾಗಿರುವ ಟೋಲ್ ಪ್ಲಾಜಗಳಲ್ಲಿ ಖಾಸಗಿ ಕಂಪನಿ ಹೆಸರಿನಲ್ಲಿ ಏಜೆನ್ಸಿಗಳು ವಾಹನಗಳ ಮಾಲೀಕರಿಂದ ಡಬಲ್ ಚಾರ್ಜ್ ವಸೂಲಿ ಮಾಡುವ ಮೂಲಕ ಹಗಲು ದರೋಡೆ ನಡೆಸುತ್ತಿದ್ದಾರೆ ಎಂದು ಚಾಲಕರು ಹಾಗೂ ವಾಹನಗಳ ಮಾಲೀಕರು ಆರೋಪಿಸಿದ್ದಾರೆ.
ತಾಲೂಕಿನ ಗುಯಿಲಾಳು ಮತ್ತು ಶಿರಾ ತಾಲೂಕಿನ ಕಳ್ಳಂಬೆಳ್ಳ ಸಮೀಪದ ಖಾಸಗಿ ಕಂಪನಿ ನಿರ್ವಹಿಸುತ್ತಿರುವ ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಈ ಎರಡು ಟೋಲ್ ಪ್ಲಾಜಾಗಳಲ್ಲಿ ವಾಹನಗಳಿಗೆ ಫಾಸ್ಟ್ಯಾಗ್ ಮಾಡಿಸಿಲ್ಲ ಎಂಬ ನೆಪವೊಡ್ಡಿ ಡಬಲ್ ಶುಲ್ಕ ವಸೂಲು ಮಾಡುತ್ತಿದ್ದು, ಫಾಸ್ಟ್ಯಾಗ್ ಮಾಡಿಸಿಲ್ಲದ ಇಂತಹ ಹಗಲು ದರೋಡೆ ತಡೆಯಲು ಯಾರಿಂದಲೂ ಸಾಧ್ಯ ಇಲ್ಲವೇ ಎನ್ನುವಂತಹ ಮಾತುಗಳು ಕೇಳಿ ಬರುತ್ತಿವೆ.
ಫಾಸ್ಟ್ಯಾಗ್ ಮೂಲಕ ಹೆದ್ದಾರಿ ಬಳಕೆ ಶುಲ್ಕ ಪಾವತಿ ಮಾಡಲು ಕೇಂದ್ರ ಸರ್ಕಾರದ ಸಾರಿಗೆ ಇಲಾಖೆ ಫೆಬ್ರವರಿ 15 ರವರೆಗೆ ಗಡವು ವಿಸ್ತರಿಸಿದೆ. ಆದರೆ ಟೋಲ್‍ಗಳಲ್ಲಿನ ಸಿಬ್ಬಂದಿಗಳು ಫಾಸ್ಟ್ಯಾಗ್ ಮಾಡಿಸಿಲ್ಲದ ವಾಹನಗಳ ಚಾಲಕರು ಮತ್ತು ಮಾಲೀಕರಿಂದ ಅಕ್ರಮವಾಗಿ ಡಬಲ್ ಶುಲ್ಕ ವಸೂಲಿ ಮಾಡಲಾಗುತ್ತಿದೆ.
ರಾಷ್ಟ್ರೀಯ ಹೆದ್ದಾರಿ ಪಕ್ಕದ ಗ್ರಾಮಗಳಿಂದ ನಿತ್ಯ ಸಾವಿರಾರು ವಾಹನಗಳು ಹೆದ್ದಾರಿ ಸಂಪರ್ಕ ಪಡೆದು ಹತ್ತಿರದ ನಗರಗಳಿಗೆ ಹೋಗಿ ಬರುತ್ತಿವೆ. ಸ್ಥಳೀಯ ಗ್ರಾಮದ ರೈತರಿಂದ ಹೆದ್ದಾರಿ ನಿರ್ಮಾಣಕ್ಕೆ ಭೂಮಿ ಪಡೆದು ಸ್ಥಳೀಯರ ಮೇಲೆ ಪ್ರತಿನಿತ್ಯ ದೌರ್ಜನ್ಯ ಎಸಗಲಾಗುತ್ತಿದೆ. ಟೋಲ್ ಪ್ಲಾಜಾ ಸುತ್ತಮುತ್ತಲಿನ 20ಕಿ.ಮೀ ದೂರದ ಸ್ಥಳೀಯ ಊರುಗಳಿಗೆ ಯಾವುದೇ ಶುಲ್ಕ ಸಂಗ್ರಹಿಸುವಂತಿಲ್ಲ, ಅಲ್ಲದೆ ಸ್ಥಳೀಯರು ಶುಲ್ಕ ರಹಿತವಾಗಿ ಸಂಚರಿಸಲು ಯಾವುದೇ ಸರ್ವೀಸ್ ರಸ್ತೆ ನಿರ್ಮಾಣ ಸಹ ಮಾಡಲಾಗಿಲ್ಲ. ಈಗಾಗಲೇ ಸರ್ವೀಸ್ ರಸ್ತೆ ಇದ್ದರೂ ಅದು ನೆಪಮಾತ್ರಕ್ಕೆ ಎಂಬಂತೆ ಇದ್ದು, ಉಪಯೋಗಕ್ಕೆ ಬರುತ್ತಿಲ್ಲ ಎಂದು ಹೇಳಿದರು.
Laxmi News 24×7