ಹುಬ್ಬಳ್ಳಿ: ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡ ನಗರದ ಶಿವಗಿರಿ ಸಮೀಪ ಬುಧವಾರ ಬೆಳಗಿನ ಜಾವ ನಡೆದಿದೆ. ಮೃತಳನ್ನು ಬಳ್ಳಾರಿ ಜಿಲ್ಲೆಯ ಬಿ ಕಗ್ಗಲ್ ಗ್ರಾಮದ ಪಲ್ಲವಿ (24) ಎಂದು ಗುರುತಿಸಲಾಗಿದೆ.
ಈ ಯುವತಿ ಕಳೆದ ಕೆಲ ವರ್ಷಗಳಿಂದ ಸ್ಪರ್ಧಾತ್ಮಕ ಪರೀಕ್ಷಾ ಸಿದ್ಧತೆಗಾಗಿ ಧಾರವಾಡದಲ್ಲಿ ಇದ್ದರು. ಇತ್ತೀಚೆಗೆ ಧಾರವಾಡದಲ್ಲಿ ಯುವಕ, ಯುವತಿಯರಿಗೆ ಉದ್ಯೋಗ ಸಿಗುತ್ತಿಲ್ಲ ಎಂಬ ಪ್ರತಿಭಟನೆಯಲ್ಲೂ ಭಾಗಿಯಾಗಿದ್ದರು.
ಆದರೆ ಇಂದು ಬೆಳಗಿನ ಜಾವ ಆತ್ಮಹತ್ಯೆ ಮಾಡಿಕೊಂಡಿದ್ದು, ಶವಪರೀಕ್ಷೆ ಕಿಮ್ಸ್ ಆಸ್ಪತ್ರೆಯಲ್ಲಿ ನಡೆಯಿತು. ಸ್ಥಳಕ್ಕೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು.ಬಳಿಕ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಶಶಿಕುಮಾರ್, “ವಿದ್ಯಾರ್ಥಿನಿ ವೈಯಕ್ತಿಕ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಡೆತ್ನೋಟ್ ಸಿಕ್ಕಿದೆ. ಆರೋಗ್ಯ ಸಮಸ್ಯೆ ಹಾಗೂ ಕೌಟುಂಬಿಕ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಈ ಬಗ್ಗೆ ನಾವು ಅವರ ಕುಟುಂಬದ ಜೊತೆಯೂ ಮಾತನಾಡಿದ್ದೇವೆ. ಅವರೂ ಕೂಡ ಆರೋಗ್ಯ ಸಮಸ್ಯೆ ಹಾಗೂ ಕೌಟುಂಬಿಕ ಸಮಸ್ಯೆ ಇರುವುದನ್ನು ಒಪ್ಪಿಕೊಂಡಿದ್ದಾರೆ. ಯುವತಿಯಾದ ಕಾರಣ ಡೆತ್ ನೋಟ್ನಲ್ಲಿನ ಯಾವುದೇ ವಿಷಯವನ್ನು ಬಹಿರಂಗಪಡಿಸುವುದಿಲ್ಲ. ಎಲ್ಲ ಕೋನಗಳಿಂದಲೂ ತನಿಖೆ ನಡೆಸಲಾಗುತ್ತಿದೆ” ಎಂದರು.
Laxmi News 24×7