ಬೆಂಗಳೂರು : ಒಂದೇ ಕುಟುಂಬದ ಮೂರು ಜನರು ಶವವಾಗಿ ಪತ್ತೆಯಾಗಿರುವ ದಾರುಣ ಘಟನೆ ನಗರದ ತಾವರೆಕೆರೆಯ 1ನೇ ಮುಖ್ಯರಸ್ತೆಯಲ್ಲಿ ನಡೆದಿದೆ. ಮಾದಮ್ಮ (68), ಅವರ ಪುತ್ರಿ ಸುಧಾ (38) ಹಾಗೂ ಸುಧಾ ಅವರ 14 ವರ್ಷ ವಯಸ್ಸಿನ ಪುತ್ರ ಶವವಾಗಿ ಪತ್ತೆಯಾಗಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಬೆಂಗಳೂರು ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತೀಮಾ, ಸುದ್ದುಗುಂಟೆಪಾಳ್ಯ ಠಾಣೆ ಪೊಲೀಸರು ಹಾಗೂ ಸೋಕೋ ತಂಡದ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ತಮಿಳುನಾಡಿನ ಧರ್ಮಪುರಿ ಮೂಲದ ಕುಟುಂಬ ಒಂದೂವರೆ ವರ್ಷದಿಂದ ತಾವರೆಕೆರೆಯಲ್ಲಿ ವಾಸವಿತ್ತು. ಮಾದಮ್ಮ ಜೊತೆ ಪುತ್ರಿ ಸುಧಾ ಹಾಗೂ ಅವರ ಮೊಮ್ಮಗ ವಾಸವಿದ್ದರು. ಆರಂಭದಲ್ಲಿ ಬಿರಿಯಾನಿ ಹೋಟೆಲ್ ನಡೆಸುತ್ತಿದ್ದ ತಾಯಿ – ಮಗಳು, ನಂತರ ಹಾಲಿನ ವ್ಯಾಪಾರದ ಜೊತೆಗೆ ಮನೆಗೆಲಸ ಮಾಡಿಕೊಂಡಿದ್ದರು. ಆದರೆ, ಇಂದು ಬೆಳಗ್ಗೆ ಪೊಲೀಸ್ ಸಹಾಯವಾಣಿಗೆ ಬಂದ ಕರೆ ಆಧರಿಸಿ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಮೂವರೂ ಶವವಾಗಿ ಬಿದ್ದಿರುವುದು ಕಂಡುಬಂದಿದೆ. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಈ ಕುರಿತು ಡಿಸಿಪಿ ಸಾರಾ ಫಾತೀಮಾ ಅವರು ಮಾತನಾಡಿದ್ದು, ‘ಈ ಕುರಿತು ಬೆಳಗ್ಗೆ 11:30ಕ್ಕೆ ಸುದ್ದುಗುಂಟೆಪಾಳ್ಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ ನಂತರ ನಾವು ಘಟನಾ ಸ್ಥಳಕ್ಕೆ ಬಂದು ನೋಡಿದೆವು. ಆಗ ಮೂವರು ಡೆತ್ ಆಗಿರುವ ಬಗ್ಗೆ ತಿಳಿದುಬಂತು. ತಾಯಿ, ಮಗಳು ಹಾಗೂ ಮೊಮ್ಮಗ ತೀರಿಹೋಗಿರುವ ಬಗ್ಗೆ ಗೊತ್ತಾಗಿದ್ದರಿಂದ ನಾವು ಘಟನೆಯ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದೇವೆ. ತನಿಖೆ ಮಾಡುತ್ತಿದ್ದೇವೆ. ಮರಣೋತ್ತರ ಪರೀಕ್ಷೆಯ ನಂತರವೇ ಸಾವಿಗೆ ನಿಖರ ಕಾರಣ ಏನೆಂಬುದು ಗೊತ್ತಾಗಲಿದೆ. ಭಾನುವಾರ ಮೂವರೂ ಧರ್ಮಪುರಿ ಬಳಿಯ ದೇವಸ್ಥಾನಕ್ಕೆ ಹೋಗಿ ಪೂಜೆ ಮುಗಿಸಿಕೊಂಡು ವಾಪಸ್ ಬಂದಿದ್ದರು. ನಂತರ ಸಹೋದರಿಯೊಂದಿಗೂ ಮಾತನಾಡಿದ್ದಾರೆ’ ಎಂದು ತಿಳಿಸಿದ್ದಾರೆ.
Laxmi News 24×7