*ಶಿಕ್ಷಣ ಇಲಾಖೆಯ ಕಚೇರಿಗಳಲ್ಲಿ ಅವ್ಯವಹಾರ; ಲೋಕಾಯುಕ್ತ ದಾಳಿ!
ಶಿಕ್ಷಣ ಇಲಾಖೆಯ ಕಚೇರಿಗಳಲ್ಲಿ ಲೋಕಾಯುಕ್ತರ ದಾಳಿ!
ಡಿಡಿಪಿಐ, ಬಿಇಒ ಕಚೇರಿಗಳಲ್ಲಿ ದಾಖಲೆ ಪರಿಶೀಲನೆ
ಅವ್ಯವಹಾರ ಭ್ರಷ್ಟಾಚಾರದ ದೂರುಗಳ ಮೇಲೆ ದಾಳಿ
ಶಿಕ್ಷಕ ನೇಮಕ, ಸೌಲಭ್ಯ ನೀಡುವಲ್ಲಿ ಅಕ್ರಮ
ವಿಜಯಪುರ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ವ್ಯಾಪಕ ಅವ್ಯವಹಾರ ಹಾಗೂ ಭ್ರಷ್ಟಾಚಾರದ ಆರೋಪಗಳ ಹಿನ್ನೆಲೆಯಲ್ಲಿ ಡಿಡಿಪಿಐ ಕಚೇರಿ ಹಾಗೂ ವಿಜಯಪುರ ನಗರ ಹಾಗೂ ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗಳ ಮೇಲೆ ಗುರುವಾರ ಸಾಯಂಕಾಲ ಲೋಕಾಯುಕ್ತ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿ, ದಾಖಲೆಗಳ ಪರಿಶೀಲನೆ ನಡೆಸಿದರು.
ಶಿಕ್ಷಣ ಇಲಾಖೆಯಲ್ಲಿನ ಅವ್ಯವಹಾರ, ಭ್ರಷ್ಟಾಚಾರದ ದೂರುಗಳ ಆಧಾರದ ಮೇಲೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಸ್ವಯಂ ಪೇರಿತ ಪ್ರಕರಣ ದಾಖಲಿಸಿಕೊಂಡು, ಕಚೇರಿಗಳಲ್ಲಿ ಶೋಧ ಕಾರ್ಯ ನಡೆಸಲು ವಾರೆಂಟ್ ಹೊರಡಿಸಿದ್ದರು. ಅದರಂತೆ ಗುರುವಾರ ಲೋಕಾಯುಕ್ತ ಎಸ್ಪಿ ಟಿ.ಮಲ್ಲೇಶ
ಮಾರ್ಗದರ್ಶನದಲ್ಲಿ ಪೊಲೀಸ್ ಉಪಾಧೀಕ್ಷಕರು ಹಾಗೂ ನಾಲ್ವರು ಇನ್ಸ್ಪೆಕ್ಟರ್ಗಳ ತಂಡವು ಮೂರು ಕಚೇರಿಗಳ ಮೇಲೆ ದಾಳಿ ನಡೆಸಿ, ಶೋಧ ಕಾರ್ಯ ಕೈಗೊಂಡಿತು.ನಗರದ ಜಿಲ್ಲಾಧಿಕಾರಿಗಳ ಕಚೇರಿ ರಸ್ತೆಯಲ್ಲಿರುವ ಡಿಡಿಪಿಐ ಕಚೇರಿ ಹಾಗೂ ನಗರ ಹಾಗೂ ಗ್ರಾಮೀಣ ವಲಯದ ಎರಡು ಬಿಇಒ ಕಚೇರಿಗಳಲ್ಲಿ ತೀವ್ರ ದಾಖಲೆಗಳ ಪರಿಶೀಲನೆ ನಡೆಸಿದರು. ಈ ವೇಳೆ, ನಿವೃತ್ತಿ ಶಿಕ್ಷಕರ ವೇತನ ವಿಳಂಬ, ವೈದ್ಯಕೀಯ ಬಿಲ್ಗಳ ವಿಲೇವಾರಿಯಲ್ಲಿ ವಿಳಂಬ ಮಾಡುವುದು ಪತ್ತೆಯಾಗಿದೆ. ಅಲ್ಲದೇ. ಶಿಕ್ಷಕರ ಸೌಲಭ್ಯ ನೀಡುವಲ್ಲಿ ಅಕ್ರಮ ಎಸಗಿರುವುದೂ ಸಹ ಪತ್ತೆ ಹೆಚ್ಚಲಾಗಿದೆ. ಅಷ್ಟೇ ಅಲ್ಲ, ವಿದ್ಯಾರ್ಥಿಗಳಿಗೆ ನೀಡಬೇಕಾದ ಪಠ್ಯ ಪುಸ್ತಕಗಳನ್ನು ಸಮರ್ಪಕವಾಗಿ ವಿತರಿಸದೆ ಇರುವುದು ಸಹ ಕಂಡು ಬಂದಿದೆ.
ಇದಲ್ಲದೇ, ಅತಿಥಿ ಶಿಕ್ಷಕರ ನೇಮಕದಲ್ಲಿ ಪಾರದರ್ಶಕತೆ ಇಲ್ಲದಿರುವುದು ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರ ನೇಮಕಾತಿ ನೀಡುವಲ್ಲಿ ಅನಗತ್ಯ ವಿಳಂಬ ಮಾಡುತ್ತಿರುವುದು ಕಂಡು ಬಂದಿದೆ. ಡಿ.5ರಂದು ಸಹ ಶೋಧ ಕಾರ್ಯ ಮುಂದುವರೆಯಲಿದೆ ಎಂದು ಎಸ್ಪಿ ಟಿ.ಮಲ್ಲೇಶ ತಿಳಿಸಿದ್ದಾರೆ.
Laxmi News 24×7