ಮೈಕ್ರೋ ಸಾಫ್ಟ್ ಹೆಸರಲ್ಲಿ ಅಮೆರಿಕಾ ಪ್ರಜೆಗಳಿಗೆ ಸೈಬರ್ ವಂಚನೆ: ಬೆಂಗಳೂರಲ್ಲಿ 21 ಆರೋಪಿಗಳ ಬಂಧನ
ಬೆಂಗಳೂರು: ಸೈಬರ್ ವಂಚನೆಗೆ ಕಡಿವಾಣ ಹಾಕಲು ಸಿಐಡಿ ಕಚೇರಿಯಲ್ಲಿ ನೂತನವಾಗಿ ಆರಂಭಿಸಿರುವ ಸೈಬರ್ ಕಮಾಂಡ್ ಸೆಂಟರ್ (ಸಿಸಿಸಿ) ಭರ್ಜರಿ ಕಾರ್ಯಾಚರಣೆ ನಡೆಸಿ, ಮೈಕ್ರೋ ಸಾಫ್ಟ್ ಹೆಸರು ದುರ್ಬಳಕೆ ಮಾಡಿಕೊಂಡು, ಬೆಂಗಳೂರಿನಲ್ಲಿ ಕುಳಿತು ಅಮೆರಿಕಾ ಪ್ರಜೆಗಳು ಸೇರಿ ಇತರೆ ನಾಗರಿಕರನ್ನು ಬೆದರಿಸಿ ವಂಚಿಸುತ್ತಿದ್ದ 21 ಸೈಬರ್ ವಂಚಕರ ಜಾಲವನ್ನು ಬಂಧಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಸ್‌ಐ ವಂದನಾ ಕಲಗುಡಿ ಎಂಬವರು ನೀಡಿದ ದೂರಿನನ್ವಯ ವೈಟ್‌ಫೀಲ್ಡ್ ಸೆನ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿ, ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಕೃತ್ಯಕ್ಕೆ ಬಳಸುತ್ತಿದ್ದ ಕಂಪ್ಯೂಟರ್‌ಗಳು, ಡಿಜಿಟಲ್ ಉಪಕರಣಗಳು, ಹಾರ್ಡ್ ಡಿಸ್ಕ್, ಲ್ಯಾಪ್‌ಟಾಪ್, ಮೊಬೈಲ್ ಫೋನ್‌ಗಳು ಮತ್ತು ಎಲೆಕ್ಟ್ರಾನಿಕ್ ಸಾಕ್ಷ್ಯಗಳನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವೈಟ್‌ಫೀಲ್ಡ್ ಮುಖ್ಯರಸ್ತೆಯ ವರ್ತೂರು, ಕೋಡಿಯಲ್ಲಿರುವ ಡೆಲ್ಟಾ ಬಿಲ್ಡಿಂಗ್‌ನ 6ನೇ ಮಹಡಿಯಲ್ಲಿ 4,500 ಚದರ ಅಡಿ ವಿಸ್ತೀರ್ಣವಿರುವ ಮಸ್ಕ್ ಕಮ್ಯುನಿಕೇಷನ್, ಸಿಗ್ಮ ಸಾಫ್ಟ್ ಟೆಕ್ ಪಾರ್ಕ್ ಎಂಬ ಹೆಸರಿನಲ್ಲಿ ನಕಲಿ ಸಾಫ್ಟ್‌ವೇರ್ ಎಂಬ ಕಂಪೆನಿಯನ್ನು ಕಳೆದ ಆಗಸ್ಟ್‌ನಲ್ಲಿ ಆರಂಭಿಸಲಾಗಿತ್ತು. ಇಲ್ಲಿ ಕಂಪ್ಯೂಟರ್ ಉಪಕರಣಗಳನ್ನು ಇಟ್ಟುಕೊಂಡು ಬೇರೆ ರಾಜ್ಯದ ಜನರನ್ನು ಕೆಲಸಕ್ಕೆ ನೇಮಿಸಿಕೊಂಡು ಅವರಿಗೆ ಸೈಬರ್ ಕ್ರೈಂ ಬಗ್ಗೆ ತರಬೇತಿ ನೀಡುತ್ತಿದ್ದರು. ಅಮೆರಿಕಾ ಮತ್ತು ಇತರೆ ದೇಶಗಳ ಪ್ರಜೆಗಳನ್ನು ಆನ್‌ಲೈನ್ ಮೂಲಕ ಸಂಪರ್ಕಿಸಿ, ಪ್ರತಿಷ್ಠಿತ ಕಂಪೆನಿಗಳ ಹೆಸರನ್ನು ಹೇಳಿಕೊಂಡು ಅವರ ಲ್ಯಾಪ್‌ಟಾಪ್ ಕಂಪ್ಯೂಟರ್‌ಗಳನ್ನು ಹ್ಯಾಕ್ ಮಾಡಿ ಸಾರ್ವಜನಿಕರ ಖಾಸಗಿ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದರು. ನಂತರ ಅವರಿಗೆ ತಮ್ಮ ವಿರುದ್ಧ ಮನಿಲಾಂಡರಿಂಗ್ ಪ್ರಕರಣ ದಾಖಲಾಗಿದೆ ಎಂದು ಹೆದರಿಸಿ ಅವರನ್ನು ಡಿಜಿಟಲ್ ಅರೆಸ್ಟ್ ಮಾಡುತ್ತಿದ್ದರು. ನಾವು ಪೊಲೀಸ್‌ನವರು ಎಂದು ಹೇಳಿಕೊಂಡು ನಿಮಗೆ ಸಹಾಯ ಮಾಡುವುದಾಗಿ ನಂಬಿಸಿ ಅವರಿಂದ ವಿವಿಧ ಖಾತೆಗಳಿಗೆ ಹಣ ಹಾಕಿಸಿಕೊಂಡು ವಂಚನೆ ಮಾಡುತ್ತಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Laxmi News 24×7