ಮಂಡ್ಯ: ಕಾರ್ಮಿಕ ಇಲಾಖೆ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಬೆಂಗಳೂರು, ಸಾರಿಗೆ ಇಲಾಖೆ ಹಾಗೂ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ವತಿಯಿಂದ ಜಿಲ್ಲೆಯ ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಹಾಗೂ ಅರಿವು ಕಾರ್ಯಕ್ರಮವು ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಜರುಗಿತು.
ಕಾರ್ಯಕ್ರಮವನ್ನು ಮಂಡ್ಯ ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಉದ್ಘಾಟಿಸಿದರು. ಕಾರ್ಮಿಕ ಸಚಿವ ಸಚಿವ ಸಂತೋಷ್ ಎಸ್. ಲಾಡ್ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ಹಾಗೂ ವಿವಿಧ ಸೌಲಭ್ಯಗಳನ್ನು ವಿತರಣೆ ಮಾಡಿದರು.
ನಂತರ ಮಾತನಾಡಿದ ಸಚಿವ ಎನ್. ಚಲುವರಾಯಸ್ವಾಮಿ ರಾಜಕಾರಣ ಬೇರೆ. ಅಭಿರುದ್ಧಿ ವಿಚಾರ ಬೇರೆ. ಆದರೆ ದೇಶ ಅಭಿವೃದ್ಧಿಯಾಗುವುದು ನಿಮ್ಮೆಲ್ಲರ ತೀರ್ಮಾನ. ದುಡಿಯುವ ವರ್ಗ ವಿಮರ್ಶೆ ಮಾಡಲು ಹೋಗುವುದಿಲ್ಲ. ನಮ್ಮ ಪಕ್ಷ ಕಳೆದ ಚುನಾವಣೆಯಲ್ಲಿ 138 ಸ್ಥಾನಗಳನ್ನು ಪಡೆದು ಅಧಿಕಾರಕ್ಕೆ ಬಂದಾಗಿನಿಂದ ನಿಮ್ಮಗಳ ಕಷ್ಟಕ್ಕೆ ಸ್ಪಂದಿಸಿದೆ. ಕಾಂಗ್ರೆಸ್ ಸರ್ಕಾರ ವರ್ಷಕ್ಕೆ 50 ಸಾವಿರ ಕೋಟಿ ರೂಪಾಯಿ ಯೋಜನೆಗಳ ಮೂಲಕ ಸೌಲಭ್ಯವನ್ನು ನೀಡಿದೆ ಎಂದರು.
ಇಡೀ ದೇಶದಲ್ಲೇ ನಮ್ಮ ರಾಜ್ಯ ಜನಪರ ಕಾರ್ಯಕ್ರಮ ನೀಡುತ್ತಿರುವ ಸರ್ಕಾರವಾಗಿದೆ. ಕಾರ್ಮಿಕ ಇಲಾಖೆ ವ್ಯಾಪ್ತಿಯಲ್ಲಿ ಕಳೆದ ಎರಡೂವರೆ ವರ್ಷದ ಅವಧಿಯಲ್ಲಿ 101 ವರ್ಗದ 35ಲಕ್ಷ ಅಸಂಘಟಿತ ಕಾರ್ಮಿಕರನ್ನು ಗುರುತಿಸಿ ಸರ್ಕಾರದ ಸೌಲಭ್ಯ ನೀಡಲಾಗಿದೆ. ಯಾವುದೇ ಜಾತಿ ಬೇಧವಿಲ್ಲದೆ ರೈತರಿಗೆ, ಮಹಿಳೆಯರಿಗೆ, ಕಾರ್ಮಿಕರಿಗೆ ಹಾಗೂ ದುರ್ಬಲ ವರ್ಗದವರಿಗೆ ಹಲವಾರು ಯೋಜನೆಗಳ ಮೂಲಕ ನೆರವು ನೀಡುತ್ತಾ ಬಂದಿದೆ. ನಮ್ಮ ಸರ್ಕಾರ ರಾಜ್ಯದ ಎಲ್ಲಾ ವರ್ಗದ ಜನರ ಪರ ಇದೆ ಎಂದು ಹೇಳಿದರು.
ಮುಖ್ಯಮಂತ್ರಿ ಅವರು ಎಲ್ಲಾ ಸಚಿವರಿಗೆ ಜವಾಬ್ದಾರಿ ಕೊಟ್ಟು ಕೆಲಸ ಮಾಡ್ತಿದ್ದಾರೆ. ಕಾರ್ಮಿಕ ಇಲಾಖೆ ಮಾಡ್ತಿರುವ ಕಾರ್ಯಕ್ರಮ ಯಶಸ್ವಿಯಾಗಿದೆ. ಕಾರ್ಮಿಕರು ಇದರ ಸದುಪಯೋಗ ಪಡೆದುಕೊಳ್ಳಿ. ಕಾಂಗ್ರೆಸ್ ಸರ್ಕಾರ ನಿಮ್ಮ ಕ್ಷೇಮಾಭಿವೃದ್ಧಿಗೆ ಕೆಲಸ ಮಾಡ್ತಿದೆ. ನಮ್ಮ ಸರ್ಕಾರದಿಂದ ಎಲ್ಲಾ ಸೌಲಭ್ಯ ಒದಗಿಸುವ ಕೆಲಸ ಆಗುತ್ತಿದೆ ಎಂದು ಸಚಿವ ಚಲುರಾಯಸ್ವಾಮಿ ಸಮರ್ಥಿಸಿಕೊಂಡರು.
ಬಳಿಕ ಮಾತನಾಡಿದ ಕಾರ್ಮಿಕ ಸಚಿವ ಸಂತೋಷ್ ಲಾಡ್, ಅಸಂಘಟಿತ ಕಾರ್ಮಿಕರಿಗೆ ಸರ್ಕಾರದ ಸೌಲಭ್ಯವನ್ನು ತಲುಪಿಸಲು ರಾಜ್ಯಾದಂತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಪ್ರವಾಸವನ್ನು ಕೈಗೊಂಡಿದ್ದು, ಇದು 26ನೇ ಕಾರ್ಯಕ್ರಮವಾಗಿದೆ ಎಂದು ತಿಳಿಸಿದರು.
Laxmi News 24×7