ಬೆಳಗಾವಿ: ಅದ್ಧೂರಿ ಕರ್ನಾಟಕ ರಾಜ್ಯೋತ್ಸವಕ್ಕೆ ಬೆಳಗಾವಿಯಲ್ಲಿ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇಲ್ಲಿನ ರಾಣಿ ಚನ್ನಮ್ಮ ವೃತ್ತ ಮದುವಣಗಿತ್ತಿಯಂತೆ ಶೃಂಗಾರಗೊಂಡಿದೆ. ಇಂದು ಮಧ್ಯರಾತ್ರಿಯಿಂದಲೇ ಸಂಭ್ರಮಾಚರಣೆ ಆರಂಭವಾಗಲಿದೆ. 12 ಗಂಟೆ ಆಗುತ್ತಿದ್ದಂತೆ ಬೃಹತ್ ಸಿಡಿಮದ್ದು ಪ್ರದರ್ಶನ ನಡೆಯಲಿದ್ದು, ಕನ್ನಡಾಭಿಮಾನಿಗಳು ಕುಣಿದು ಕುಪ್ಪಳಿಸಲು ಸಜ್ಜಾಗಿದ್ದಾರೆ.
ನಗರ ರಾಣಿ ಚನ್ನಮ್ಮ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಧರ್ಮವೀರ ಸಂಭಾಜಿ ವೃತ್ತ, ಕಾಕತಿ ವೇಸ್, ಕಾಲೇಜು ರಸ್ತೆ, ಅಂಬೇಡ್ಕರ್ ಮಾರ್ಗ, ಡಾ.ರಾಜ್‌ಕುಮಾರ್ ಮಾರ್ಗ, ಜಿಲ್ಲಾಧಿಕಾರಿ ಕಚೇರಿ, ಮಹಾನಗರ ಪಾಲಿಕೆ ಕಚೇರಿ, ಕಾಂಗ್ರೆಸ್ ರಸ್ತೆ ಸೇರಿ ಪ್ರಮುಖ ರಸ್ತೆಗಳು ಹಳದಿ – ಕೆಂಪು ಬಣ್ಣದ ಬಾವುಟಗಳಿಂದ ಕಂಗೊಳಿಸುತ್ತಿವೆ. ಅದರಲ್ಲೂ ಚನ್ನಮ್ಮ ವೃತ್ತದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.
ನಾಲ್ಕೂ ದಿಕ್ಕಿನ ರಸ್ತೆಗಳಿಗೆ ಕೆಂಪು-ಹಳದಿ ಬಣ್ಣದ ಭವ್ಯ ಸ್ವಾಗತ ಕಮಾನು ಹಾಕಲಾಗಿದೆ. ರಸ್ತೆಯ ವಿಭಜಕಗಳಲ್ಲಿ ಕಂಬಗಳನ್ನು ನೆಟ್ಟು ಕೆಂಪು–ಹಳದಿ ಬಾವುಟಗಳನ್ನು ಹಾರಿಸಲಾಗಿದೆ. ಕನ್ನಡದ ಆದಿ ಕವಿಗಳು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ನಟರು, ದಾಸರು, ಶರಣರ ಚಿತ್ರಪಟಗಳು ರಾರಾಜಿಸುತ್ತಿವೆ. ಅದೇರೀತಿ ಜನಪ್ರತಿನಿಧಿಗಳು, ಕನ್ನಡ ಹೋರಾಟಗಾರರ ಬ್ಯಾನರ್ಗಳ ಅಬ್ಬರ ಜೋರಾಗಿದೆ. ಇನ್ನು ವಿವಿಧ ಕನ್ನಡ ಸಂಘಟನೆಗಳು ತಮ್ಮ ತಮ್ಮ ಮಂಟಪಗಳನ್ನು ಹಾಕಿದ್ದಾರೆ. ಈ ಮಂಟಪಗಳು ಕೆಂಪು-ಹಳದಿ ಬಾವುಟಗಳಿಂದ ಕಂಗೊಳಿಸುತ್ತಿವೆ.
ಚನ್ನಮ್ಮ ಪುತ್ಥಳಿಗೆ ಬಣ್ಣ: ಬೆಳಗಾವಿ ನಗರದ ಶಕ್ತಿ ಕೇಂದ್ರವಾಗಿರುವ ಚನ್ನಮ್ಮ ವೃತ್ತದಲ್ಲಿ ರಾಣಿ ಚನ್ನಮ್ಮಾಜಿ ಪುತ್ಥಳಿಗೆ ಹೊಸದಾಗಿ ಬಣ್ಣ ಬಳಿಯಲಾಗಿದ್ದು, ಆಕರ್ಷಕವಾಗಿ ಅಲಂಕರಿಸಲಾಗಿದೆ. ನಗರದ ಬಹುತೇಕ ರಸ್ತೆ ಪಕ್ಕದ ಮಳಿಗೆ, ಮನೆಗಳಿಗೂ ದೀಪಾಲಂಕಾರ ಮಾಡಲಾಗಿದ್ದು. ಮಹಾನಗರ ಪಾಲಿಕೆಯಿಂದ ರಾಣಿ ಚನ್ನಮ್ಮ ವೃತ್ತ, ರಾಯಣ್ಣ ವೃತ್ತಗಳಲ್ಲಿ ವಿದ್ಯುದೀಪಾಲಂಕಾರ ಮಾಡಲಾಗಿದೆ. ನಗರದ ಪ್ರಮುಖ ರಸ್ತೆಗಳೆಲ್ಲವೂ ಈಗ ಕನ್ನಡಮಯವಾಗಿರುವುದು ವಿಶೇಷ.
Laxmi News 24×7