ಶಿವಮೊಗ್ಗ: ಸಕ್ರೆಬೈಲು ಆನೆ ಬಿಡಾರದ ಬಾಲಣ್ಣ ಎಂಬ ಹೆಸರಿನ ಸಾಕಾನೆಯ ಬಲ ಕಿವಿಯನ್ನು ಬೆಂಗಳೂರಿನ ವೈದ್ಯರ ತಂಡವು ಕಟ್ ಮಾಡಿದೆ. ಆನೆಗೆ ಕಿವಿಯ ಬಳಿ ಸಣ್ಣದೊಂದು ಗಾಯವಾಗಿತ್ತು. ಗಾಯಕ್ಕೆ ಸಕಾಲಕ್ಕೆ ಚಿಕಿತ್ಸೆ ಸಿಗದ ಕಾರಣ ಅದು ದೊಡ್ಡದಾಗಿತ್ತು. ಹಾಗಾಗಿ ಕಿವಿಯನ್ನೇ ಕತ್ತರಿಸಲಾಗಿದೆ.
ಕಳೆದ ತಿಂಗಳು ಶಿವಮೊಗ್ಗದಲ್ಲಿ ನಡೆದಿದ್ದ ಅದ್ಧೂರಿ ದಸರಾದ ಜಂಬೂ ಸವಾರಿ ಮೆರವಣಿಗೆಯಲ್ಲಿ ಬಾಲಣ್ಣ ಹೆಜ್ಜೆ ಹಾಕಿ ಎಲ್ಲರ ಗಮನ ಸೆಳೆದಿತ್ತು.
ಬೆಂಗಳೂರು ವೈದ್ಯರಿಂದ ಸೂಕ್ತ ಚಿಕಿತ್ಸೆ: ಚಿಕಿತ್ಸೆ ಸಂದರ್ಭದಲ್ಲಿ ಬಾಲಣ್ಣ ಆನೆಯ ಬಲ ಕಿವಿಯ ಬಳಿ ಒಂದು ಚುಚ್ಚುಮದ್ದು ನೀಡಲಾಗಿತ್ತು. ಆನೆ ಶಿವಮೊಗ್ಗದ ದಸರಾಕ್ಕೆ ಆಗಮಿಸುವ ಮುನ್ನ ಕಾಲು ನೋವಿನಿಂದ ಬಳಲುತ್ತಿತ್ತು. ಇದಕ್ಕೆ ನಿವೃತ್ತ ಪಶುವೈದ್ಯ ಡಾ. ಕಲ್ಲಣ್ಣ ಅವರು ಚುಚ್ಚುಮದ್ದು ನೀಡಿದ್ದರು. ಚೇತರಿಕೆ ಕಾಣದ ಹಿನ್ನೆಲೆ ಹುಲಿ ಮತ್ತು ಸಿಂಹಧಾಮದ ವೈದ್ಯಾಧಿಕಾರಿ ಡಾ. ಮುರಳಿ ಅವರು ಅದೇ ಜಾಗಕ್ಕೆ ಮತ್ತೆ ಚುಚ್ಚುಮದ್ದು ನೀಡಿದ್ದರು. ಇದು ರಿಯಾಕ್ಷನ್ ಆದ ಕಾರಣ ಅಲ್ಲಿ ಗಾಯವಾಗಿತ್ತು. ಗಾಯ ಒಣಗದ ಕಾರಣ ಅಲ್ಲಿ ಕೀವು ಬಂದು ಗಾಯ ದೊಡ್ಡದಾಗುತ್ತಾ, ಕಿವಿ ಉದುರಲು ಪ್ರಾರಂಭಿಸಿತ್ತು.
ಕಿವಿ ಬಳಿ ಒಂದು ಗ್ಯಾಂಗ್ರಿನ್ ರೀತಿಯ ಗಾಯ ಕಾಣಿಸಿಕೊಂಡಿತ್ತು. ಇದಕ್ಕಾಗಿ ವನ್ಯಜೀವಿ ವಿಭಾಗದ ಡಿಎಫ್ಒ ಪ್ರಸನ್ನ ಪಟಗಾರ್ ಅವರು ಸಿಸಿಎಫ್ ಕೆ.ಟಿ. ಹನುಮಂತಪ್ಪ ಅವರ ಜೊತೆ ಚರ್ಚಿಸಿದ್ದಲ್ಲದೇ, ಬೆಂಗಳೂರಿನಿಂದ ಡಾ. ಚೆಟ್ಟಿಯಾರ್, ಡಾ. ರಮೇಶ್ ಹಾಗೂ ಇನ್ನಿಬ್ಬರು ಸೇರಿದಂತೆ ಒಟ್ಟು ನಾಲ್ಕು ಜನ ವೈದ್ಯರ ತಂಡವನ್ನು ಇಲ್ಲಿಗೆ ಕರೆಯಿಸಿಕೊಂಡಿದ್ದರು. ಈ ವೈದ್ಯರ ತಂಡ ಕಳೆದ ಮೂರು ದಿನಗಳಿಂದ ಚಿಕಿತ್ಸೆ ಪ್ರಾರಂಭಿಸಿತ್ತು. ಕಿವಿ ಬಳಿ ಉಂಟಾಗಿದ್ದ ಗ್ಯಾಂಗ್ರಿನ್ ಆನೆಯ ದೇಹದ ಇತರೆ ಭಾಗಕ್ಕೂ ಹರಡುವ ಸಂಭವ ಇದ್ದಿದ್ದರಿಂದ ಅದನ್ನು ತಡೆಯುವ ಸಲುವಾಗಿ ಕಿವಿಯನ್ನೇ ಕತ್ತರಿಸಲಾಗಿದೆ. ಆನೆಗೆ ಚಿಕಿತ್ಸೆ ಮುಂದುವರೆದಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
Laxmi News 24×7