ಬೆಂಗಳೂರು: ನವೆಂಬರ್ ಕ್ರಾಂತಿ ಎಲ್ಲ ಆಗಲ್ಲ. ಕ್ರಾಂತಿ ಆಗಲು ಹೈಕಮಾಂಡ್ ಬಿಡಬೇಕಲ್ವಾ?. ಹೈಕಮಾಂಡ್ ಹಾಗೆಲ್ಲ ಮಾಡೋಕೆ ಬಿಡಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.
ನಗರದಲ್ಲಿಂದು ಮಾತನಾಡಿದ ಅವರು, ಇನ್ನೊಂದು 20-30 ದಿನ ಇದೆ ಅಷ್ಟೇ. ಏನಾಗುತ್ತದೆ ನೋಡೋಣ ಎಂದರು. ಇದೇ ವೇಳೆ, ಏಕನಾಥ್ ಶಿಂಧೆ ಒಬ್ಬರೇ, ಪವಾರ್ ಕೂಡ ಒಬ್ಬರೇ. ಇನ್ನೊಬ್ಬ ಏಕನಾಥ್ ಶಿಂಧೆ, ಪವಾರ್ ಹುಟ್ಟಿಕೊಳ್ಳಲು ಆಗಲ್ಲ ಎಂದರು.
ನಾವೇನು ಸಿಎಂ ಸ್ಥಾನ ಕೇಳಿಲ್ಲ: ಅಹಿಂದ ನಾಯಕತ್ವದ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ನಾನು 30 ವರ್ಷದಿಂದ ಅಹಿಂದ ಪಾರ್ಟಿ. ಜೆಡಿಎಸ್ನಲ್ಲಿ ಇದ್ದಾಗಲೂ ಅಹಿಂದ ಭಾಗವೇ. ಈಗಲೂ ಅಹಿಂದ ಭಾಗವೇ. ಪರಮೇಶ್ವರ್, ಮಹದೇವಪ್ಪ ಎಲ್ಲರೂ ಅದರ ಭಾಗವೇ. ಯತೀಂದ್ರ ಎಲ್ಲಿಯೂ ಸಿಎಂ ಸ್ಥಾನವಾಗಲಿ, ಅಧ್ಯಕ್ಷ ಸ್ಥಾನದ ಬಗ್ಗೆಯಾಗಲೀ ಕೇಳಿಲ್ಲ. ಸಿಎಂ ಸ್ಥಾನದ ವಿಚಾರವೇ ಬೇರೆ, ಯತೀಂದ್ರ ಹೇಳಿರೋದೇ ಬೇರೆ. ನಾವೇನೂ ಸಿಎಂ ಸ್ಥಾನ ಕೇಳಿಲ್ಲ. ಯಾರು ಯತೀಂದ್ರ ಹೇಳಿಕೆ ವಿರೋಧಿಸುತ್ತಿದ್ದಾರೋ ಅವರು ತಪ್ಪು ತಿಳಿದುಕೊಂಡಿದ್ದಾರೆ. ಅಹಿಂದ ಒಕ್ಕೂಟ, ಅಹಿಂದ ಹೋರಾಟ ಮೊದಲಿನಿಂದಲೂ ಇದೆ ಎಂದು ತಿಳಿಸಿದರು.
ನಮ್ಮ ನಡೆ ಇದರಲ್ಲಿ ಏನೂ ಇಲ್ಲ. 2028ರ ಚುನಾವಣೆ ಆಗಬೇಕು. ಅವತ್ತು ಸ್ಥಿತಿಗತಿ ನೋಡಿಕೊಂಡು ನಿರ್ಧಾರ ಮಾಡೋಣ. ಪಕ್ಷದ ಹೈಕಮಾಂಡ್ ಯಾರನ್ನು, ಏನೆಂದು ಮಾಡಬೇಕೋ ನಿರ್ಧಾರ ಮಾಡುತ್ತದೆ. ಪಕ್ಷಕ್ಕೂ 70 ವರ್ಷದ ಅನುಭವವಿದೆ. ಅವರು ಎಲ್ಲವನ್ನೂ ನಿರ್ಧಾರ ಮಾಡ್ತಾರೆ ಎಂದರು.
ದಲಿತ ಸಿಎಂ ಆಯ್ಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಅವಕಾಶ ಬರುವವರೆಗೂ ಕಾಯಬೇಕು. ಈಗಂತೂ ಅವಕಾಶವಿಲ್ಲ. ಸಮಯಕ್ಕಾಗಿ ಕಾಯೋಣ. ಅವಕಾಶ ಸೃಷ್ಟಿ ಆಗಬೇಕು ಎಂದು ಹೇಳಿದರು.
ನಾಯಕತ್ವ ಬದಲಾವಣೆ ಬಗ್ಗೆ ಹೈಕಮಾಂಡ್ ತೀರ್ಮಾನ- ಪರಮೇಶ್ವರ್: ನಾಯಕತ್ವ ಬದಲಾವಣೆ ಅಥವಾ ಸಂಪುಟ ಪುನಾರಚನೆಯ ಅಗತ್ಯವಿದ್ರೆ ಬಿಹಾರ ಚುನಾವಣೆಯ ಬಳಿಕ ಕಾಂಗ್ರೆಸ್ ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಇಂದು ಸದಾಶಿವನಗರ ನಿವಾಸದ ಬಳಿ ಮಾತನಾಡಿದ ಅವರು, ಸಿಎಂ ಬದಲಾವಣೆ ಬಗ್ಗೆ ತೀರ್ಮಾನ ಕೈಗೊಳ್ಳುವುದು ಹೈಕಮಾಂಡ್. ನಾವು ಇಲ್ಲಿ ಕುಳಿತುಕೊಂಡು ತೀರ್ಮಾನ ಕೈಗೊಳ್ಳಲು ಆಗುವುದಿಲ್ಲ. ಅವಶ್ಯಕತೆ ಇದ್ದರೆ ಬಿಹಾರ ಚುನಾವಣೆ ನಂತರ ಹೈಕಮಾಂಡ್ನವರೇ ತೀರ್ಮಾನ ಮಾಡುತ್ತಾರೆ. ಪುನಾರಚನೆಯೋ?, ಎರಡೂವರೆ ವರ್ಷದ ನಂತರ ಅಧಿಕಾರ ಬದಲಾವಣೆಯೋ?, ಏನೇ ಇದ್ರೂ ಹೈಕಮಾಂಡ್ ತೀರ್ಮಾನ ಮಾಡಲಿದೆ. ನಾವು ಇಲ್ಲಿ ಮಾತಾಡೋದರಿಂದ ಗೊಂದಲ ಆಗುತ್ತೆ. ಆಡಳಿತಕ್ಕೆ ಚುರುಕು ಕೊಡುವ ಕೆಲಸ ಆಗಬೇಕಾಗಿದೆ. ಸಂಪುಟ ಪುನಾರಚನೆ ಬಗ್ಗೆ ನನಗೆ ಯಾರೂ ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು.
Laxmi News 24×7