ಹಾವೇರಿ: ಬೆಳಗಾವಿಯಲ್ಲಿ ಕಲ್ಲು ತೂರಾಟ ಘಟನೆಗೆ ರಾಜ್ಯ ಪೊಲೀಸ್ ಇಲಾಖೆಯ ವೈಫಲ್ಯ ಕಾರಣ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ. ಈ ಕುರಿತು ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಅರಾಜಕತೆ, ಹಿಂಸೆ ಮಾಡಬೇಕು ಅನ್ನೋದು ಒಂದು ವರ್ಗದ ಹುನ್ನಾರ. ಅದಕ್ಕೆ ಕೆಲವು ಶಕ್ತಿಗಳು ಬೆಂಬಲ ನೀಡುತ್ತಿದ್ದಾರೆ ಎಂದು ದೂರಿದರು.
ಉತ್ತರಪ್ರದೇಶ ರಾಜ್ಯದಲ್ಲಿ ಈ ರೀತಿ ಇತ್ತು. ದಾವಣಗೆರೆ ಘಟನೆ ನಡೆದ ನಂತರ ಕರ್ನಾಟಕದಲ್ಲಿ ನಿಯಂತ್ರಣ ಮಾಡಬೇಕು ಅನ್ನೋ ಆಗ್ರಹವನ್ನು ನಾವು ಮಾಡಿದ್ದೆವು. ನಿಯಂತ್ರಣ ಮಾಡುತ್ತೇವೆ ಅಂದಿದ್ದರು. ಹೆಚ್ಚಿನ ಜಾಗೃತಿ ತೆಗೆದುಕೊಳ್ಳುವಲ್ಲಿ ಪೊಲೀಸರು ವಿಫಲವಾಗಿದ್ದಾರೆ ಎಂದು ಬೊಮ್ಮಾಯಿ ಹೇಳಿದ್ದಾರೆ.
ಮಂಡ್ಯ, ಮದ್ದೂರು ಘಟನೆ ನೋಡಿದಾಗ ರಾಜ್ಯದಲ್ಲಿ ಸಂಪೂರ್ಣ ಕಾನೂನು ಸುವ್ಯವಸ್ಥೆ ಕುಸಿದಿದೆ. ಕಾನೂನು ಭಯ, ಪೊಲೀಸರ ಭಯ ಜನರಲ್ಲಿ ಇಲ್ಲದಂತಾಗಿದೆ. ಸರ್ಕಾರ ಹಲವು ಪ್ರಕರಣಗಳನ್ನು ನಿಭಾಯಿಸುವಲ್ಲಿ ವಿಫಲವಾಗಿದೆ. ಗೃಹ ಸಚಿವರು ಈ ಘಟನೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಜಾತಿ, ಧರ್ಮ, ಮತ, ಪಂಥದ ಹೆಸರಿನಲ್ಲಿ ದೇಶ ಒಡೆಯಲು ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ರಾಜ್ಯಕ್ಕೆ ಜಿಎಸ್ಟಿ ಅನುದಾನ ಕಡಿತಗೊಳಿಸಿದ ಕೇಂದ್ರ ಸರ್ಕಾರದ ವಿರುದ್ಧ ಸಿಎಂ ನ್ಯಾಯಾಲಯಕ್ಕೆ ಹೋಗುವ ವಿಚಾರ ಕುರಿತಂತೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ಸಿಎಂ ಸಿದ್ದರಾಮಯ್ಯ ಒಂದು ಸುಳ್ಳನ್ನು ನೂರು ಸಲ ಹೇಳಿ ಸತ್ಯ ಮಾಡಲು ಹೊರಟಿದ್ದಾರೆ. ಮನಸ್ಸಿನಲ್ಲಿ ಮಂಡಿಗಿ ತಿಂದರೆ ಲೆಕ್ಕ ಕೊಡುವವರು ಯಾರು? ಎಂದು ಪ್ರಶ್ನಿಸಿದರು.
15ನೇ ಹಣಕಾಸಿನಲ್ಲಿ 14 ರಿಂದ 1 ಲಕ್ಷ ಕೋಟಿ ಹೆಚ್ಚು ಮೊತ್ತ ರಾಜ್ಯಕ್ಕೆ ಬರುತ್ತಿದೆ. ಪ್ರತಿ ವರ್ಷ ಇಯರ್ ಎಂಡ್ನಲ್ಲಿ 3000 ಕೋಟಿ ರೂಪಾಯಿ ಬರುತ್ತಿದೆ. ಬಂದಿದ್ದನ್ನು ಸಿದ್ದರಾಮಯ್ಯ ಹೇಳೋದಿಲ್ಲ ಎಂದು ದೂರಿದರು.
ಕಳೆದ ಬಾರಿ ಮಳೆಹಾನಿ ಪರಿಹಾರ ಕೊಡೋದಕ್ಕೆ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿದ ನಂತರ ಹಣ ನೀಡಿದ್ದಾರೆ.
ಈ ಬಾರಿ ಬೆಳೆಹಾನಿ ಘೋಷಣೆ ಮಾಡಿದ್ದಾರೆ. ಇನ್ನೂ ನೀಡಿಲ್ಲ. ನಾನು ಸಿಎಂ ಇದ್ದಾಗ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡುವ ಮುನ್ನವೇ ಎರಡು ಪಟ್ಟು ಹೆಚ್ಚು ಬೆಳೆಹಾನಿ ನೀಡಿದ್ದೆ. ಕೇಂದ್ರದ ಹಣವನ್ನು ಕಾಯಲಿಲ್ಲ ಎಂದರು.