ಶಿವಮೊಗ್ಗ: ಯುವಕನೊಬ್ಬ ತಾನು ಪ್ರೀತಿಸಿದ ಯುವತಿಯನ್ನು ಬಲವಂತವಾಗಿ ಭದ್ರಾವತಿ ಕಾಲುವೆಗೆ ತಳ್ಳಿ ಕೊಲೆ ಮಾಡಿರುವುದಾಗಿ ದೂರು ದಾಖಲಾಗಿದೆ. ಭದ್ರಾವತಿ ತಾಲೂಕು ಅಂತರಗಂಗೆ ಬಳಿ ಯರೇಹಳ್ಳಿಯ ಬೋವಿ ಕಾಲೋನಿಯ ಸ್ವಾತಿ ಅಲಿಯಾಸ್ ಮಹಾಲಕ್ಷ್ಮಿ ಮೃತ ಯುವತಿ. ಯುವತಿಯ ಪೋಷಕರು ನೀಡಿದ ದೂರಿನ ಆಧಾರಲ್ಲಿ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಸೂರ್ಯನನ್ನು ಬಂಧಿಸಲಾಗಿದೆ.
ಇವರಿಬ್ಬರೂ ದೂರದ ಸಂಬಂಧಿಗಳಾಗಿದ್ದರು. ಸೆಪ್ಟಂಬರ್ 21 ರಂದು ಯುವತಿಯನ್ನು ಸೂರ್ಯ ಮನೆಯಿಂದ ಕರೆದುಕೊಂಡು ಹೋಗಿ ಗ್ರಾಮದ ಆಚೆ ಇರುವ ಭದ್ರಾ ಕಾಲುವೆಗೆ ನೂಕಿದ್ದಾನೆಂದು ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕಾಲುವೆಯ ದಡದ ಮೇಲೆ ವಿಷ ಕುಡಿದ ಸ್ಥಿತಿಯಲ್ಲಿ ಸೂರ್ಯ ಪತ್ತೆಯಾಗಿದ್ದನು.
ಯುವತಿಯ ಕುಟುಂಬಸ್ಥರು ಮೊದಲು ನಾಪತ್ತೆ ದೂರು ದಾಖಲಿಸಿ್ದ್ದಕಾರು. ಸೆ.24ರಂದು ಕಾಲುವೆಯಲ್ಲಿ ಮಗಳ ಮೃತದೇಹ ಪತ್ತೆಯಾದ ಬಳಿಕ ಕೊಲೆ ಪ್ರಕರಣ ದಾಖಲಿಸಿದ್ದಾರೆ.
ಕೊಲೆ ಪ್ರಕರಣದ ಕುರಿತು ಎಸ್.ಪಿ. ಮಿಥುನ್ ಕುಮಾರ್ ಪ್ರತಿಕ್ರಿಯಿಸಿ, “ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. 19 ವರ್ಷದ ಸ್ವಾತಿ ಮೃತ ಯುವತಿ. ಯುವತಿಯ ಸ್ನೇಹಿತ ಸೂರ್ಯ (20) ಕೊಲೆ ಆರೋಪಿ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸೂರ್ಯ ಸ್ವಾತಿಯನ್ನು ಬಲವಂತವಾಗಿ ಭದ್ರಾ ಕಾಲುವೆ ಬಳಿ ಕರೆದುಕೊಂಡು ಹೋಗಿ ಒತ್ತಾಯ ಪೂರ್ವಕವಾಗಿ ಇರುವೆ ಸಾಯಿಸಲು ಬಳಸುವ ಪುಡಿಯನ್ನು ಸ್ವಾತಿಗೆ ತಿನ್ನಿಸಿ, ಭದ್ರಾ ಕಾಲುವೆಗೆ ನೂಕಿ ಕೊಲೆ ಮಾಡಿದ್ದಾನೆಂದು ಎಫ್ಐಆರ್ನಲ್ಲಿ ದಾಖಲಾಗಿದೆ. ಕೊಲೆ ಆರೋಪಿ ಸೂರ್ಯನನ್ನು ಬಂಧನ ಮಾಡಲಾಗಿದ್ದು, ಮುಂದಿನ ತನಿಖೆ ಕೈಗೊಳ್ಳಲಾಗಿದೆ. ಆರೋಪಿ ತಂದೆಯ ಪಾತ್ರ ಕೂಡ ಇದೆ ಎಂದು ದೂರಿನಲ್ಲಿ ಹೇಳಿದ್ದಾರೆ. ಆ ಬಗ್ಗೆಯೂ ಪರಿಶೀಲಿಸಲಾಗುತ್ತಿದೆ. ಇಬ್ಬರೂ ಪ್ರೀತಿಸುತ್ತಿದ್ದರಾ ಎಂಬುದು ತನಿಖೆಯಿಂದ ಗೊತ್ತಾಗಬೇಕಿದೆ” ಎಂದರು.