ಚಿಕ್ಕೋಡಿ : ಪಿ ರಾಜೀವ್ ಅವರೇ ಲೋಕಾಯುಕ್ತ ತನಿಖೆ ಯಾವಾಗ? : ರಮೇಶ ಯಡವನ್ನವರ
ರಾಯಬಾಗ: ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದಲ್ಲಿ ಸನ್ 2021-22ನೇ ಸಾಲಿನ ಮುಖ್ಯಮಂತ್ರಿಗಳ ಅಮೃತ ನಗರೋಸ್ಥಾನ ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಹಂಚಿಕೆಯಾಗಬೇಕಿದ್ದ ಉಚಿತ ಹೊಲಿಗೆ ಯಂತ್ರಗಳ ಜಟಾಪಟಿ ಇನ್ನೂ ಧಗಧಗಿಸುತ್ತಿದೆ. ಪ್ರತಿನಿತ್ಯ ಹೊಲಿಗೆ ಯಂತ್ರಗಳಿಗಾಗಿ ಮಹಿಳೆಯರು ಪುರಸಭೆಗೆ ಬಂದು ಬಂದು ಹೋಗುತ್ತಿದ್ದಾರೆ. ಆದರೆ ಯಂತ್ರಗಳು ಮಾತ್ರ ಸಿಗುತ್ತಿಲ್ಲ.
ಈ ಮಧ್ಯ ಕುಡಚಿ ಮಾಜಿ ಶಾಸಕ ಹಾಗು ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ ರಾಜೀವ್ ಅವರು ಒಂದು ವಿಡಿಯೋವನ್ನು ಹರಿಬಿಟ್ಟಿದ್ದು, ಹೊಲಿಗೆ ಯಂತ್ರಗಳ ಯೋಜನೆ ನನ್ನ ಅವಧಿಯಲ್ಲಿ ಆಗಿರುವ ಕೆಲಸ ಎಲ್ಲ ಫಲಾನುಭವಿಗಳಿಗೆ ಹಂಚಿಕೆ ಮಾಡಬೇಕು. ಹಂಚಿಕೆ ಆಗದೇ ಹೋದಲ್ಲಿ ಲೋಕಾಯುಕ್ತ ದೂರು ಸಲ್ಲಿಸಿ ತನಿಖೆ ನಡೆಸುತ್ತೇನೆ ಎನ್ನುವ ಎಚ್ಚರಿಕೆ ನೀಡಿದ್ದಾರೆ.
ಈ ಹೇಳಿಕೆಗೆ ಪ್ರತಿಯಾಗಿ ಇಂದು ಮುಗಳಖೋಡ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕಾಂಗ್ರೆಸ್ ಪಕ್ಷದ ಪುರಸಭೆ ಸದ್ಯರು, ಕಾರ್ಯಕರ್ತರು ಪಿ ರಾಜೀವ್ ಅವರಿಗೆ ಸವಾಲ್ ಹಾಕಿದ್ದಾರೆ. ಈ ವೇಳೆ ಮಾತನಾಡಿದ ಪುರಸಭೆ ಸದಸ್ಯ ರಮೇಶ ಯಡವನ್ನವರ ಈ ಹೊಲಿಗೆ ಯಂತ್ರ ಹಂಚಿಕೆಯಲ್ಲಿ ವಿಳಂಬವಾಗಿರುವುದಕ್ಕೆ ನಮ್ಮ ಕುಡಚಿ ಶಾಸಕ ಮಹೇಂದ್ರ ತಮ್ಮನ್ನವರ ಕಾರಣರಲ್ಲ.
ಈಗಾಗಲೇ ಅರ್ಧ ಯಂತ್ರಗಳ ಹಂಚಿಕೆಯಾಗಿದೆ. ಇನ್ನುಳಿದ ಯಂತ್ರಗಳ ಹಂಚಿಕೆಯ ವಿಳಂಬಕ್ಕೆ ಬಿಜೆಪಿಯವರೇ ಕಾರಣ. ಬಡವರ ಅರ್ಹ ಫಲಾನುಭವಿಗಳ ಯೋಜನೆಯಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಗುಡುಗಿದರು. ಅಲ್ಲದೆ ಮಾಜಿ ಶಾಸಕರಾದ ಪಿ ರಾಜೀವ್ ಅವರು ಲೋಕಾಯುಕ್ತಕ್ಕೆ ದೂರು ಸಲ್ಲಿಸುತ್ತೇನೆ ಎಂದು ಹೇಳಿರುವುದು ಸ್ವಾಗತಾರ್ಹವಾದ ವಿಷಯ. ಅವರು ಈಗಾಗಲೇ ದೂರು ಸಲ್ಲಿಸಿದ್ದಾರೆ ಎಂದು ತಿಳಿದುಕೊಂಡಿದ್ದೇವೆ.
ಅದರಂತೆ ಪಟ್ಟಣದಲ್ಲಿ ಅರ್ಧಕ್ಕೆ ನಿಂತಿರುವ ಸರಕಾರಿ ಪ್ರೌಢ ಶಾಲಾ ಕಾಮಗಾರಿ ಸೇರಿದಂತೆ ಇತರೆ ಕಾಮಗಾರಿಗಳ ತನಿಖೆಯು ನಡೆಸಲಿ ಎಂದು ಸವಾಲ್ ಹಾಕಿದ್ದಾರೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಪುರಸಭೆ ಸದಸ್ಯರು, ಕಾರ್ಯಕರ್ತರು ಹಾಗೂ ಪಕ್ಷದ ಮುಖಂಡರು ಹಾಜರಿದ್ದರು.