ಚಿಕ್ಕೋಡಿ: ಬಿಜೆಪಿಯಲ್ಲಿ ಎರಡು ಗುಂಪುಗಳಿವೆ. ಅವರಲ್ಲಿಯೇ ಧರ್ಮಸ್ಥಳದ ವಿರುದ್ಧ ಪರ- ವಿರೋಧವಿದೆ. ಇದರಿಂದಾಗಿ, ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅಪಪ್ರಚಾರ ನಡೆಯುತ್ತಿದೆ ಎಂದು ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಆರೋಪಿಸಿದ್ದಾರೆ.
ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಸೋಮವಾರ ರಾತ್ರಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಎರಡು ತಂಡಗಳಿವೆ. ಅದರಲ್ಲಿ ಒಂದು ತಂಡ ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡುತ್ತಿದೆ. ಇದೆಲ್ಲವೂ ರಾಜಕೀಯ ಲಾಭ ಪಡೆಯಲು ಮಾಡಲಾಗುತ್ತಿದೆ ಎಂದರು.
ಡಿಕೆಶಿ ಆರ್ಎಸ್ಎಸ್ ಪ್ರಾರ್ಥನೆ ವೈಯಕ್ತಿಕ: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸದನದಲ್ಲಿ ಆರ್ಎಸ್ಎಸ್ ಪ್ರಾರ್ಥನೆ ಗೀತೆ ಹಾಡಿದ ವಿಚಾರವಾಗಿ ಮಾತನಾಡಿ, ಅದು ಅವರ ವೈಯಕ್ತಿಕ. ಇದನ್ನು ಪಕ್ಷಕ್ಕೆ ಅಂಟಿಸಿದರೆ ಏನು ಉತ್ತರ ಕೊಡಬೇಕು? ಹೊರಗೆ ಹಲವು ವಿಚಾರ ಮಾತನಾಡುತ್ತಾರೆ. ಅವರ ವೈಯಕ್ತಿಕ ವಿಚಾರಕ್ಕೆ ಸರ್ಕಾರ ಹೇಗೆ ಉತ್ತರ ಕೊಡುತ್ತದೆ? ಅದು ಅವರ ವೈಯಕ್ತಿಕ. ಪಕ್ಷ ಈ ಕುರಿತು ಏನೂ ನಿರ್ದೇಶನ ನೀಡಿಲ್ಲ. ಕಳೆದ 70 ವರ್ಷಗಳಿಂದ ಸದನದಲ್ಲಿ ಕೆಲವರು ವೈಯಕ್ತಿಕ ವಿಷಯಗಳನ್ನಿಟ್ಟುಕೊಂಡು ಮಾತನಾಡುತ್ತಾರೆ. ಎಲ್ಲವನ್ನೂ ಮಾತನಾಡಲು ಸದನ ಅವಕಾಶ ನೀಡಿದೆ ಎಂದು ಪ್ರತಿಕ್ರಿಯಿಸಿದರು.
ಅಥಣಿ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಚಿಂತನೆ ಮಾಡುತ್ತೇವೆ. ಈಗಾಗಲೇ ಹಲವರು ಇಲ್ಲಿ ಸಮಸ್ಯೆ ಆಗುತ್ತಿದೆ ಎಂದು ಹೇಳಿದ್ದಾರೆ. ನಮ್ಮ ಇಲಾಖೆಯಿಂದ ರಾಯಭಾಗ ಮತ್ತು ಹುಕ್ಕೇರಿಯಲ್ಲಿ ಬೈಪಾಸ್ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಅದೇ ರೀತಿಯಲ್ಲಿ ಅಥಣಿಯಲ್ಲಿ ಕೂಡ ನಿರ್ಮಾಣಕ್ಕೆ ಅಧ್ಯಯನ ಮಾಡುತ್ತೇನೆ. ಜಿಲ್ಲೆಯಲ್ಲಿ ಖಾಲಿ ಇರುವ ಪೊಲೀಸ್ ಹುದ್ದೆಗಳನ್ನು ಭರ್ತಿ ಮಾಡಲು ಎಸ್ಪಿ ಅವರು ಸರ್ಕಾರದ ಗಮನಕ್ಕೆ ತಂದಿದ್ದಾರೆ. ನಾವು ಕೂಡ ಅದನ್ನು ಫಾಲೋಅಪ್ ಮಾಡುತ್ತೇವೆ ಎಂದರು.