ಮಂಗಳೂರು, ಆಗಸ್ಟ್ 23: ಧರ್ಮಸ್ಥಳದಲ್ಲಿ ಶವಗಳನ್ನ ಹೂತಿಟ್ಟ ಆರೋಪ ರಾಜಕೀಯ ತಿರುವು ಪಡೆದುಕೊಂಡಿದೆ. ಇತ್ತ ಬಿಜೆಪಿ ಧರ್ಮದ ಉಳಿವಿಗಾಗಿ ಧರ್ಮಯುದ್ಧ ಎಂಬ ಚಳವಳಿ ಶುರುಮಾಡಿದೆ. ಈ ಮಧ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವ ಬೆಳವಣಿಗೆಯೊಂದು ನಡೆದಿದೆ. ಸಾಕ್ಷಿದಾರನಾಗಿ ಬಂದಿದ್ದ ಅನಾಮಿಕ ಮಾಸ್ಕ್‌ಮ್ಯಾನ್ (Masked man) ನನ್ನು ಇದೀಗ ಎಸ್ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ಸಿಎನ್ ಚಿನ್ನಯ್ಯ ಅಲಿಯಾಸ್ ಚೆನ್ನ ಬಂಧಿತ ಆರೋಪಿ. ಈ ಮಾಸ್ಕ್‌ಮ್ಯಾನ್ ಯಾರು, ಎಲ್ಲಿಯವನು ಎಂದು ಸಾಕಷ್ಟು ಚರ್ಚೆಗಳು ನಡೆದಿದ್ದವು. ಸ್ವತಃ ಎಸ್ಐಟಿ ಅಧಿಕಾರಿಗಳು ದಾಖಲೆ ಸಮೇತ ಈತ ಮಂಡ್ಯದ ಚಿಕ್ಕಬಳ್ಳಿ ಗ್ರಾಮದವನು ಎಂದು ಬಯಲು ಮಾಡಿದ್ದಾರೆ.
ಧರ್ಮಸ್ಥಳದ ಸುತ್ತ ಎದ್ದಿರುವ ಇಷ್ಟು ದೊಡ್ಡ ವಿವಾದದ ಕೇಂದ್ರ ಬಿಂದುವೇ ಮಾಸ್ಕ್‌ಮ್ಯಾನ್ ಆಗಿದ್ದ. ಅಕ್ರಮವಾಗಿ ನೂರಾರು ಹೆಣಗಳನ್ನ ಹೂತಿದ್ದೇನೆ ಅಂತಾ ಮಾಡಿದ್ದ ಆರೋಪ ದೇಶದಲ್ಲೇ ಸಂಚಲನ ಎಬ್ಬಿಸಿತ್ತು. ತನಿಖೆಗೆ ಸರ್ಕಾರ ಎಸ್ಐಟಿ ಕೂಡ ರಚಿಸಿತ್ತು. ಈತ ತೋರಿಸಿದ 17 ಪಾಯಿಂಟ್‌ಗಳಲ್ಲೂ ಶೋಧ ಮಾಡಲಾಗಿತ್ತು. ಆದರೆ ಈತ ಹೇಳಿದಂತೆ ಅಸ್ಥಿಪಂಜರಗಳು ಸಿಕ್ಕಿಲ್ಲ. ಹೀಗಾಗಿ, ಈ ಮಾಸ್ಕ್‌ಮ್ಯಾನ್ ಯಾರು? ಈತನ ಬ್ಯಾಕ್‌ಗ್ರೌಂಡ್ ಏನು? ಅವನ ಉದ್ದೇಶ ಏನು? ಅಂತಾ ಮುಖವಾಡ ಕಳಚಲಾಗಿದೆ.
ಮಂಡ್ಯ ಮೂಲದ ಮಾಸ್ಕ್‌ಮ್ಯಾನ್ ವಿವಾದಿತ ವ್ಯಕ್ತಿ
ಇನ್ನು ಮಾಸ್ಕ್‌ಮ್ಯಾನ್ ಹುಟ್ಟಿ ಬೆಳೆದಿದ್ದು ನಮ್ಮ ಗ್ರಾಮದಲ್ಲೇ, ಆತ ಹುಟ್ಟು ಸೋಮಾರಿ ಎಂದು ಮಂಡ್ಯ ಜಿಲ್ಲೆಯ ಚಿಕ್ಕಬಳ್ಳಿ ಗ್ರಾಮದ ನಿಂಗರಾಜು ಮತ್ತು ಶಂಕರೇಗೌಡ ಎಂಬುವವರು ಟಿವಿ9ಗೆ ಹೇಳಿಕೆ ನೀಡಿದ್ದರು. ದೂರುದಾರ ಮಂಡ್ಯ ಮೂಲದವನು. ಹುಟ್ಟಿ ಬೆಳೆದಿದ್ದು ನಮ್ಮ ಗ್ರಾಮದಲ್ಲೇ. ಆತ ಧರ್ಮಾಧಿಕಾರಿ ಬಗ್ಗೆ ಹೇಳುತ್ತಿರುವುದು ಸುಳ್ಳು ಎಂದಿದ್ದರು.