ಬೆಳಗಾವಿ: ಪಾಗಲ್ ಪ್ರೇಮಿಯೊಬ್ಬ ತಾನು ಪ್ರೀತಿಸುತ್ತಿದ್ದ ವಿವಾಹಿತ ಮಹಿಳೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿ ಬಳಿಕ ಅದೇ ಚಾಕುವಿನಿಂದ ತಾನೂ ಚುಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಖಾನಾಪುರ ತಾಲೂಕಿನ ಬೀಡಿ ಗ್ರಾಮದಲ್ಲಿ ನಡೆದಿದೆ.
ಬೀಡಿ ಗ್ರಾಮದ 28 ವರ್ಷದ ಮಹಿಳೆ ಕೊಲೆಯಾದವರು. ಕೊಲೆಗೈದು ಬಳಿಕ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಆನಂದ ರಾಜು ಸುತಾರ(30) ಎಂದು ಗುರುತಿಸಲಾಗಿದೆ. ಇಬ್ಬರು ಒಂದೇ ಗ್ರಾಮದವರಾಗಿದ್ದು, ಕಳೆದ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಕೊಲೆಗೆ ಅನೈತಿಕ ಸಂಬಂಧ ಕಾರಣ ಎಂಬ ಶಂಕೆ ವ್ಯಕ್ತವಾಗಿದೆ.
ಕೊಲೆಯಾದ ಮಹಿಳೆಗೆ ಮದುವೆಯಾಗಿದ್ದು, ಎರಡು ಮಕ್ಕಳಿದ್ದಾರೆ. ಆನಂದನಿಗೂ ಮದುವೆ ಆಗಿ ಮೂರು ಮಕ್ಕಳಿದ್ದಾರೆ. ಈತನ ಪತ್ನಿ ಗರ್ಭಿಣಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಆದರೂ ಆನಂದ ಮತ್ತು ಮಹಿಳೆ ವಿವಾಹೇತರ ಸಂಬಂಧ ಹೊಂದಿದ್ದರು ಎನ್ನಲಾಗಿದೆ.
ಕೆಲ ದಿನಗಳ ಹಿಂದೆಯಷ್ಟೇ ಇಬ್ಬರು ಪರಸ್ಪರ ಪ್ರೀತಿಸುತ್ತಿರುವ ವಿಷಯ ಮಹಿಳೆಯ ಗಂಡನಿಗೆ ತಿಳಿದಿತ್ತು. ಇದರಿಂದ ಮನೆಯಲ್ಲಿ ಸಣ್ಣಪುಟ್ಟ ಗಲಾಟೆಗಳು ಶುರುವಾಗಿದ್ದವು. ಅಲ್ಲದೇ ಮಹಿಳೆಯ ಪತಿ ನಂದಗಡ ಪೊಲೀಸ್ ಠಾಣೆಯಲ್ಲಿ ಆನಂದ ವಿರುದ್ಧ ದೂರು ನೀಡಿದ್ದರು. ಪೊಲೀಸರು ಆನಂದನನ್ನು ಠಾಣೆಗೆ ಕರೆಸಿ ಇನ್ಮುಂದೆ ಮಹಿಳೆಯ ಸಹವಾಸಕ್ಕೆ ಹೋಗದಂತೆ ಮತ್ತು ಅನೈತಿಕ ಸಂಬಂಧ ಮುಂದುವರಿಸದಂತೆ ಇಬ್ಬರಿಗೂ ಬುದ್ಧಿವಾದ ಹೇಳಿ ಕಳುಹಿಸಿದ್ದರು.