ವರ್ಷಗಳ ವಿಳಂಬದ ಬಳಿಕ ಬೆಂಗಳೂರು ಮೆಟ್ರೋ ಹಳದಿ ಮಾರ್ಗ ಉದ್ಘಾಟನೆಗೆ ಸಿದ್ಧ: ಆಗಸ್ಟ್ ಮಧ್ಯದಲ್ಲಿ ಕಾರ್ಯಾರಂಭ ಸಾಧ್ಯತೆ
ಬೆಂಗಳೂರು: ಆರ್ವಿ ರಸ್ತೆಯಿಂದ ಬೊಮ್ಮಸಂದ್ರವರೆಗೆ 19.15 ಕಿ.ಮೀ. ಉದ್ದದ ನಮ್ಮ ಮೆಟ್ರೋದ ಬಹು ನಿರೀಕ್ಷಿತ ಹಳದಿ ಮಾರ್ಗ ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದೆ. ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರು ಮಂಗಳವಾರ ಶಾಸನಬದ್ಧ ತಪಾಸಣೆ ಪ್ರಾರಂಭಿದ್ದು, ಶೀಘ್ರದಲ್ಲಿ ಕಾರ್ಯಾರಂಭಗೊಳ್ಳುವ ಮುನ್ಸೂಚನೆ ಸಿಕ್ಕಿದೆ. ಆಗಸ್ಟ್ ಮಧ್ಯದಲ್ಲಿ ಸಾರ್ವಜನಿಕರಿಗೆ ತೆರದುಕೊಳ್ಳುವ ನಿರೀಕ್ಷೆಯಿದೆ.
ಹಳದಿ ಮಾರ್ಗದ ಉದ್ಘಾಟನೆ ವರ್ಷಗಳಿಂದ ವಿಳಂಬವಾಗುತ್ತಿದೆ. 2021ರಲ್ಲಿ ಪೂರ್ಣಗೊಂಡು ಕಾರ್ಯಾರಂಭಗೊಳ್ಳಬೇಕಿತ್ತು. ಆದರೆ ಗಡುವಿಗೆ ಪೂರ್ಣಗೊಳದೇ, ಇನ್ನೂ ಉದ್ಘಾಟನೆಯಾಗಿಲ್ಲ. ಸ್ವತಂತ್ರ ಸುರಕ್ಷತಾ ಮೌಲ್ಯಮಾಪನ (IAS) ವರದಿ ಬಂದಿದೆ. ಸಿಎಂಆರ್ಎಸ್ ಪರಿಶೀಲನೆ ನಡೆಯುತ್ತಿದ್ದು, ಬಿಎಂಆರ್ಸಿಎಲ್ ಮೆಟ್ರೋ ಮಾರ್ಗದ ಉದ್ಘಾಟನೆಯತ್ತ ಸಮೀಪಿಸುತ್ತಿದೆ.
ಅಂತಿಮ ಸುರಕ್ಷತಾ ತಪಾಸಣೆ ಪ್ರಗತಿಯಲ್ಲಿ: BMRCL ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಯಶವಂತ್ ಚವ್ಹಾಣ್ ಮಾಹಿತಿ ನೀಡಿ, ಜುಲೈ 22 ರಂದು ಸಿಎಂಆರ್ಎಸ್ ತಪಾಸಣೆ ಆರಂಭಿಸಿ, ಇಂದು ಮುಕ್ತಾಯಗೊಂಡಿತು. ಮೊದಲ ದಿನ ಅಧಿಕಾರಿಗಳು ರೀಚ್-5 ಅನ್ನು ತಪಾಸಣೆ ನಡೆಸಿದ್ದು, ಸುಮಾರು ನಾಲ್ಕನೇ ಒಂದು ಭಾಗವನ್ನು ಪೂರ್ಣಗೊಳಿಸಿದರು. ಸಿಎಂಆರ್ಎಸ್ ತನ್ನ ವರದಿಯನ್ನು ಸಲ್ಲಿಸಿದ ನಂತರ ನಿಲ್ದಾಣದ ಕಾರ್ಯಾಚರಣೆಗಳ ಕುರಿತು ಅಂತಿಮ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ತಪಾಸಣೆ ವೇಳೆ ಹಳಿಗಳ ಸ್ಥಿತಿ, ಎತ್ತರದ ವಿಭಾಗಗಳ ರಚನಾತ್ಮಕ ಸುರಕ್ಷತೆ, ಸಿಗ್ನಲಿಂಗ್ ವ್ಯವಸ್ಥೆ ಹಾಗೂ ನಿಲ್ದಾಣಗಳ ಸಿದ್ಧತೆಯ ಪರಿಶೀಲನೆಗಳನ್ನು ಮಾಡಲಾಯಿತು. ತಪಾಸಣೆಯ ಕೊನೆಯ ದಿನದಂದು ಸಿಎಂಆರ್ಎಸ್ ಅಧಿಕಾರಿಗಳು ಬೈಯಪ್ಪನಹಳ್ಳಿ ಡಿಪೋದಲ್ಲಿರುವ ಕಾರ್ಯಾಚರಣೆ ನಿಯಂತ್ರಣ ಕೇಂದ್ರದ ತಪಾಸಣೆ ನಡೆಸಿದರು ಎಂದು ಹೇಳಿದರು.
ಆಗಸ್ಟ್ನಲ್ಲಿ ಸೀಮಿತ ಸೇವೆಗಳೊಂದಿಗೆ ಆರಂಭ: ಅನುಮೋದನೆ ದೊರೆತರೆ, ಬಿಎಂಆರ್ಸಿಎಲ್ ಹಳದಿ ಮಾರ್ಗದಲ್ಲಿ ಆರಂಭದಲ್ಲಿ, ಬೆಳಗ್ಗೆ 5 ರಿಂದ ರಾತ್ರಿ 11ರವರೆಗೆ ಪ್ರತಿ 20 ನಿಮಿಷಗಳಿಗೊಮ್ಮೆ ಒಂದು ರೈಲು ಚಲಿಸುವಂತೆ ಮೂರು ರೈಲು ಸೆಟ್ಗಳನ್ನು ತೆರೆಯಲು ಯೋಜಿಸಿದೆ. ಪ್ರತಿದಿನ 30-40 ಟ್ರಿಪ್ ಆಗಲಿವೆ. ಮೊದಲ ಹಂತದಲ್ಲಿ ಪ್ರಯಾಣಿಕರ ಸಂಖ್ಯೆ ದಿನಕ್ಕೆ 25000 ಆಗುವ ನಿರೀಕ್ಷೆಯಿದೆ. ಹೆಚ್ಚಿನ ರೈಲುಗಳು, ಅಂದರೆ ಒಟ್ಟು 15 ರೈಲು ಸೆಟ್ಗಳು ಸೇರ್ಪಡೆಗೊಂಡಂತೆ, ದೈನಂದಿನ ಪ್ರಯಾಣಿಕರ ಸಂಖ್ಯೆ 1.5ಲಕ್ಷ ಅಥವಾ ಅದಕ್ಕಿಂತ ಹೆಚ್ಚಾಗಬಹುದು. ಪೀಕ್ ಸಮಯದಲ್ಲಿ ಜನದಟ್ಟಣೆ ತಪ್ಪಿಸಲು ಜನನಿಬಿಡ ನಿಲ್ದಾಣಗಳಲ್ಲಿ ಆಯ್ದ ಪ್ರವೇಶದ್ವಾರಗಳನ್ನು ಮಾತ್ರ ತೆರೆಯುವ ಸಾಧ್ಯತೆಯಿದೆ. ಹಂತ ಹಂತವಾಗಿ ಸೇವಾಮಟ್ಟವನ್ನು ಹೆಚ್ಚಿಸುವ ಗುರಿ ಇದೆ ಎಂದು ವಿವರಿಸಿದರು.
ಆಗಸ್ಟ್ 10ರೊಳಗೆ ನಾಲ್ಕನೇ ರೈಲು ಬೆಂಗಳೂರಿಗೆ ಆಗಮಿಸುವ ನಿರೀಕ್ಷೆಯಿದೆ. ಆದರೆ ಕಾರ್ಯಾಚರಣೆ ಆರಂಭಿಸುವ ಮೊದಲು ಕನಿಷ್ಠ ಎರಡು ವಾರಗಳ ಕಾಲ ಅದನ್ನು ಪರಿಕ್ಷೆಗೆ ಒಳಪಡಿಸಲಾಗುವುದು. ರಾತ್ರಿ ವೇಳೆ ಪರೀಕ್ಷೆ ನಡೆಸಲಾಗುತ್ತದೆ. ಈ ಮೆಟ್ರೋ ಹಳದಿ ಮಾರ್ಗ ದಕ್ಷಿಣ ಬೆಂಗಳೂರಿನಲ್ಲಿ ಗಮನಾರ್ಹವಾಗಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ನಿರೀಕ್ಷೆಯಿದೆ. ಇನ್ಫೋಸಿಸ್ ಮತ್ತು ಬಯೋಕಾನ್ನಂತಹ ಪ್ರಮುಖ ಐಟಿ ಸಂಸ್ಥೆಗಳಿರುವ ಎಲೆಕ್ಟ್ರಾನಿಕ್ ಸಿಟಿಗೆ ಹಾಗೂ ಬಿಟಿಎಂ ಲೇಔಟ್, ಎಚ್ಎಸ್ಆರ್ ಲೇಔಟ್ ಮತ್ತು ಬೊಮ್ಮಸಂದ್ರದಂತಹ ವಸತಿ ಮತ್ತು ಕೈಗಾರಿಕಾ ಕೇಂದ್ರಗಳಿಗೆ ಈ ಲೈನ್ ನೇರ ಸಂಪರ್ಕ ನೀಡುತ್ತದೆ. ಸಿಲ್ಕ್ ಬೋರ್ಡ್ ಜಂಕ್ಷನ್ಗಳಲ್ಲಿನ ನಿರ್ಣಾಯಕ ಅಡಚಣೆಗಳ ಮೇಲಿನ ಹೊರೆ ಕಡಿಮೆ ಮಾಡಲಿದೆ ಎಂದು ಮಾಹಿತಿ ನೀಡಿದರು.