Breaking News

ಅಂದು ವರ, ಇಂದು ಶಾಪ; ಇದು ಬಳ್ಳಾರಿ ನಾಲಾ ಕಥೆ – ವ್ಯಥೆ: ನಾಲೆಗೆ ಬಳ್ಳಾರಿ ಹೆಸರು ಬಂದಿದ್ದು ಹೇಗೆ, ಏನಿದರ ಇತಿಹಾಸ?

Spread the love

ಬೆಳಗಾವಿ: ಒಂದು ಕಾಲದಲ್ಲಿ ಬೆಳಗಾವಿ ಜನತೆಗೆ ವರವಾಗಿದ್ದ ಈ ನಾಲಾ ಈಗ ಶಾಪವಾಗಿ ಪರಿಣಮಿಸಿದೆ. ಪರಿಶುದ್ಧವಾಗಿ ಹರಿಯುತ್ತಿದ್ದ ನೀರನ್ನು ನಾವು ಕುಡಿಯುತ್ತಿದ್ದೆವು. ಈಗ ಚರಂಡಿ ನೀರು ಸೇರಿ ಗಬ್ಬು ನಾರುತ್ತಿದೆ. ಇನ್ನು ಹೂಳು ತುಂಬಿದ ಪರಿಣಾಮ ಸಾವಿರಾರು ಎಕರೆ ಜಮೀನಿಗೆ ನೀರು ನುಗ್ಗಿ, ಬೆಳೆ ಹಾನಿ ಆಗುತ್ತಿದೆ ಎಂದು ರೈತರು ಕಣ್ಣೀರು ಸುರಿಸುತ್ತಿದ್ದಾರೆ. ನಾವು ಹೇಳಲು ಹೊರಟಿರುವುದು ಬೆಳಗಾವಿಯಲ್ಲಿರುವ ಬಳ್ಳಾರಿ ನಾಲಾ ಕಥೆ – ವ್ಯಥೆ ಮತ್ತು ಕೆಲ ಕುತೂಹಲಕಾರಿ ಸಂಗತಿಗಳನ್ನು.

ಹೌದು, ಬೆಳಗಾವಿಯಲ್ಲಿ ಬಳ್ಳಾರಿ ಹೆಸರಿನ ನಾಲಾ ಇರುವುದು ಎಲ್ಲರಿಗೂ‌ ಗೊತ್ತಿದೆ. ಪ್ರತಿವರ್ಷ ಮುಂಗಾರಿನಲ್ಲಿ‌ ಮಳೆರಾಯನ ಆರ್ಭಟದಿಂದ ಉಕ್ಕಿ ಹರಿಯುತ್ತಿರುವ ಬಳ್ಳಾರಿ ನಾಲಾ, ಸಾವಿರಾರು ಎಕರೆ ಜಮೀನು ಜಲಾವೃತ ಎಂಬ ಸುದ್ದಿಯನ್ನು ಮಾಧ್ಯಮಗಳಲ್ಲಿ ನೋಡಿರುತ್ತಿರಿ. ಹಾಗಾದ್ರೆ ಈ ನಾಲಾಗೆ ಬಳ್ಳಾರಿ ಹೆಸರು ಹೇಗೆ ಬಂತು?, ಮತ್ತೆ ಅದು ಎಲ್ಲಿ ಉಗಮವಾಗಿ, ಎಲ್ಲಿ ಸಂಗಮವಾಗುತ್ತದೆ? ಎಂಬ ಕುರಿತ ಈಟಿವಿ ಭಾರತದ ವಿಶೇಷ ವರದಿ ಇಲ್ಲಿದೆ.

ಬೆಳಗಾವಿ ತಾಲೂಕಿನ ಯಳ್ಳೂರ ಗ್ರಾಮದ ಹೊರ ವಲಯದಲ್ಲಿ‌ ಒಂದು “ಅರವಳ್ಳಿ ಜಲಾಶಯ” ಅಂತಾ ಇದೆ. ರಾಜಹಂಸಗಡ ಗುಡ್ಡದ ಮೇಲಿಂದ ಹರಿದು ಬರುವ ನೀರು ಇಲ್ಲಿ ಸಂಗ್ರಹವಾಗುತ್ತದೆ. ಈ ಜಲಾಶಯ 12 ತಿಂಗಳು ತುಂಬಿರುತ್ತದೆ. ಇನ್ನು ಮಳೆಗಾಲದಲ್ಲಿ ತುಂಬಿ ಹೆಚ್ಚುವರಿ ನೀರು ಯಳ್ಳೂರು ಗ್ರಾಮದ ಮೂಲಕ ಮಚ್ಚೆ, ಮಜಗಾವಿ, ಅನಗೋಳದ ಕೃಷಿಭೂಮಿ ಮಾರ್ಗವಾಗಿ ಸುಮಾರು 9 ಕಿ.ಮೀ.‌ ಕ್ರಮಿಸಿ ವಡಗಾವಿ-ಶಾಹಪುರ ಕೃಷಿ ಭೂಮಿ ಬಳಿಯ ಯಳ್ಳೂರ ರಸ್ತೆಯಲ್ಲಿರುವ ಸೇತುವೆಗೆ ಬಂದು ಸೇರುತ್ತದೆ. ಇದೇ ಬಳ್ಳಾರಿ ನಾಲಾ.

History behind ballari nala in belagavi

ಈ ಮೊದಲು ನೈಸರ್ಗಿಕವಾಗಿ ಈ ಬಳ್ಳಾರಿ ನಾಲಾದಲ್ಲಿ ಶುದ್ಧ ನೀರು ಹರಿದು ಬರುತ್ತಿತ್ತು. ಈ ನೀರನ್ನು ಜನರು ಕುಡಿಯುತ್ತಿದ್ದರು. ಇನ್ನು ಕೃಷಿ ಚಟುವಟಿಕೆಗಳಿಗೂ ಯಥೇಚ್ಚವಾಗಿ ಬಳಸುತ್ತಿದ್ದರು. ಇದು ನೂರಾರು ವರ್ಷಗಳಿಂದ ಜನರಿಗೆ ವರದಾನವಾಗಿತ್ತು. ಆದರೆ, ಕಳೆದ ಹತ್ತು ವರ್ಷಗಳಿಂದ ಟಿಳಕವಾಡಿ, ಅನಗೋಳ, ವಡಗಾವಿ, ಉದ್ಯಮಭಾಗ, ರಾಣಿ ಚನ್ನಮ್ಮ ನಗರ ಸೇರಿ ವಿವಿಧ ವಸತಿ ಪ್ರದೇಶಗಳಿಂದ ಬರುವ ಮಳೆ ಮತ್ತು ಚರಂಡಿ ನೀರು ಕೂಡ ಇದೇ ಬಳ್ಳಾರಿ ನಾಲಾಗೆ ಸೇರಿ ಸಂಪೂರ್ಣ ಕಲುಷಿತಗೊಂಡಿದೆ. ಅಲ್ಲದೇ ಹೂಳು, ಪ್ಲಾಸ್ಟಿಕ್ ಸೇರಿ ಮತ್ತಿತರ ತ್ಯಾಜ್ಯ ತುಂಬಿ ಶಾಪವಾಗಿ ಪರಿಣಮಿಸಿದೆ. ಮಳೆಗಾಲದಲ್ಲಿ ಪ್ರವಾಹ ಸೃಷ್ಟಿಸಿದರೆ, ಬೇಸಿಗೆಯಲ್ಲಿ ನೊರೆ ಎದ್ದು ರೋಗರುಜಿನಿಗಳನ್ನು ಹರಡುತ್ತಿದೆ.

History behind ballari nala in belagavi

ಮಾರ್ಕಂಡೇಯ ನದಿಯಲ್ಲಿ ಸಂಗಮ: ಯಳ್ಳೂರ ರಸ್ತೆ ಸೇತುವೆಯಿಂದ ವಡಗಾವಿ, ಹಳೆ ಬೆಳಗಾವಿ, ಬೆಳಗಾವಿ ನಗರ, ಬೆಳಗಾವಿ ತಾಲೂಕಿನ ಹಲಗಾ, ಬಸವನಕುಡಚಿ, ಕಣಬರಗಿ, ನಿಲಜಿ, ಮುತಗಾ, ಸಾಂಬ್ರಾ, ಮುಚ್ಚಂಡಿ, ಅಷ್ಟೆ, ಚಂದಗಡ, ಖನಗಾವ, ಚಂದೂರ, ಸುಳೇಭಾವಿ, ಯದ್ದಲಭಾವಿಹಟ್ಟಿ, ಕರ್ಲಾಪುರ, ಕರಿಕಟ್ಟಿ, ಸಿದ್ದನಹಳ್ಳಿ, ಮಾಸ್ತಹಳ್ಳಿ, ಹುಕ್ಕೇರಿ ತಾಲೂಕಿನ ಹುದಲಿ, ಸುಲಧಾಳ, ಮಾಳಮರಡಿ, ಬೂದಿಹಾಳ, ಅಂಕಲಗಿ, ಅಕ್ಕತಂಗೇರಹಾಳ, ಕುಂದರಗಿ ಸೇರಿ ಮತ್ತಿತರ ಗ್ರಾಮಗಳ ಮೂಲಕ ಕರಗುಪ್ಪಿ ಬಳಿ ಮಾರ್ಕಂಡೇಯ ನದಿಯಲ್ಲಿ ಸಂಗಮವಾಗುತ್ತದೆ. ಅರವಳ್ಳಿ ಜಲಾಶಯದಿಂದ ಮಾರ್ಕಂಡೇಯ ನದಿವರೆಗೆ ಸುಮಾರು 40 ಕಿ.ಮೀ. ದೂರ ಬಳ್ಳಾರಿ ನಾಲಾ ಹರಿಯುತ್ತದೆ. ಮಳೆಗಾಲದಲ್ಲಿ ಪ್ರತಿವರ್ಷವೂ ಈ ನಾಲಾಗೆ ಹೊಂದಿಕೊಂಡಿರುವ ಸಾವಿರಾರು ಎಕರೆ ಜಮೀನು ಜಲಾವೃತವಾಗಿ ರೈತರ ಬೆಳೆಗೆ ಹಾನಿಯಾಗುತ್ತಿದೆ.

History behind ballari nala in belagavi

ಬಳ್ಳಾರಿ ನಾಲಾ ಹೆಸರು ಬಂದಿದ್ದು ಹೇಗೆ?: 1832ರಲ್ಲಿ ಬ್ರಿಟಿಷ್ ಅಧಿಕಾರಿಗಳು ಬಳ್ಳಾರಿಯಿಂದ ಬೆನನ್ ಮತ್ತು ಸ್ಮಿತ್ ಎಂಬ ಇಬ್ಬರು ಧರ್ಮಗುರುಗಳನ್ನು ಬೆಳಗಾವಿಗೆ ಕಳಿಸಿ ಕೊಟ್ಟರು. ಅದೇ ವರ್ಷ ಬೆಳಗಾವಿಯಲ್ಲಿ‌ ಬೆನನ್-ಸ್ಮಿತ್ ಪ್ರಾಥಮಿಕ ಶಾಲೆ ಶುರು ಮಾಡಿದರು. ಈ ಇಬ್ಬರು ಧರ್ಮಗುರುಗಳು ಬಳ್ಳಾರಿಯಿಂದ ಬಂದ ಹಿನ್ನೆಲೆಯಲ್ಲಿ ಆ ಊರಿನ ಹೆಸರು ಇತಿಹಾಸದಲ್ಲಿ ಚಿರಸ್ಥಾಯಿಗೊಳಿಸುವ ನಿಟ್ಟಿನಲ್ಲಿ ಅಂದಿನ ಕೊಲ್ಹಾಪುರ ಕಲೆಕ್ಟರ್ ಈ ನಾಲಾಗೆ ಬಳ್ಳಾರಿ ನಾಲಾ ಅಂತಾ 1850ರಲ್ಲಿ ಅಧಿಕೃತವಾಗಿ ನಾಮಕರಣ ಮಾಡಿದ್ದರು. ಈಗಲೂ ಅದೇ ಹೆಸರಿನಿಂದಲೇ ಜನಪ್ರಿಯವಾಗಿದೆ. ಆರಂಭದಲ್ಲಿ 5 ಅಡಿ ಅಗಲ, 5 ಅಡಿ ಆಳದಲ್ಲಿ ಇದು ಹರಿಯುತ್ತಿತ್ತು.‌ ಈಗ ದೊಡ್ಡ ಪ್ರಮಾಣದಲ್ಲಿ ವಿಸ್ತಾರಗೊಂಡಿದೆ ಎಂದು ಈಟಿವಿ ಭಾರತಕ್ಕೆ ಸ್ಥಳೀಯ ಕೀರ್ತಿಕುಮಾರ ಕುಲಕರ್ಣಿ ವಿವರಿಸಿದರು.

History behind ballari nala in belagavi

1970ರಲ್ಲಿ ಮಾಜಿ ಸಚಿವ ದಿ.ರಾಮರಾವ್ ಪೋತದಾರ್ ಅವರ ಮುತುವರ್ಜಿಯಿಂದ 27 ಕಿ.ಮೀ. ವರೆಗೆ ಬಳ್ಳಾರಿ ನಾಲಾ ಹೂಳು ಎತ್ತಿ, 15 ಅಡಿ ಅಗಲ, 6 ಅಡಿ ಆಳದಲ್ಲಿ ನಾಲಾವನ್ನು ಮರು ನಿರ್ಮಾಣ ಮಾಡಲಾಗಿತ್ತು. ಬಳಿಕ 2010ರಲ್ಲಿ ಮಾಜಿ ಕೇಂದ್ರ ಸಚಿವ ದಿ.ಸುರೇಶ ಅಂಗಡಿ ಅವರು ಕೂಡ ಒಮ್ಮೆ ಹೂಳು ತೆಗೆಸಿದ್ದರು. ಅದಾದ ಬಳಿಕ ಯಾರೂ ಕೂಡ ಇತ್ತ ಲಕ್ಷ್ಯ ವಹಿಸಿಲ್ಲ ಎಂಬುದು ಈ ಭಾಗದ ರೈತರು ದೂರು‌.

ವೈಜ್ಞಾನಿಕ ಯೋಜನೆ ರೂಪಿಸಿ: ರೈತ ರಾಜು ಮರವೆ ಮಾತನಾಡಿ, ಬಳ್ಳಾರಿ ನಾಲಾ ಹೂಳು ತುಂಬಿದ್ದರಿಂದ ಕಳೆದ ಹತ್ತು ವರ್ಷಗಳಿಂದ ನಾವು ಇದೇ ಪರಿಸ್ಥಿತಿ ಎದುರಿಸುತ್ತಿದ್ದೇವೆ. ಸರ್ಕಾರ ಮತ್ತು ಸಂಬಂಧಿಸಿದ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಮೇ ತಿಂಗಳಿನಿಂದ ಮಳೆ ಶುರುವಾಗಿದೆ. ಈಗ ಬಾಸುಮತಿ, ಇಂದ್ರಾಯಿಣಿ ಭತ್ತ ಬಿತ್ತಿದ್ದು, ನೀರು ನಿಂತು ಪಾಚಿಕಟ್ಟಿ ಬೆಳೆ ಹಾನಿ ಆಗಿದೆ. ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿ ಕೊಟ್ಟಿದೆ. ಆದರೆ, ರೈತರನ್ನು ಬದುಕಿಸುವ ಗ್ಯಾರಂಟಿ ಕೊಟ್ಟಿಲ್ಲ. ಆದ್ದರಿಂದ ರೈತರನ್ನು ಬದುಕಿಸಿದರೆ ಎಲ್ಲರೂ ಬದುಕುತ್ತಾರೆ. ಹಾಗಾಗಿ, ಬಳ್ಳಾರಿ ನಾಲಾ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ವೈಜ್ಞಾನಿಕ ಯೋಜನೆ ರೂಪಿಸುವಂತೆ ಆಗ್ರಹಿಸಿದರು.

ಚರಂಡಿ ನೀರು ತಪ್ಪಿಸಿ: ಈ ಮೊದಲು ಸ್ವಚ್ಛಂದವಾಗಿ ನೀರು ಹರಿಯುತ್ತಿತ್ತು. ಆಗ ನಾವೆಲ್ಲಾ ಆ ನೀರು ಕುಡಿಯುತ್ತಿದ್ದೆವು. ದಿನಕಳೆದಂತೆ ಬೆಳಗಾವಿ ನಗರ ವೇಗವಾಗಿ ಬೆಳೆಯಿತು. ಡ್ರೈನೇಜ್ ನೀರು ನಾಲಾಗೆ ಸೇರಿತು. ಹೂಳು ತುಂಬಿದೆ. ಸಾರ್ವಜನಿಕರು ಕಸಕಡ್ಡಿ, ಪ್ಲಾಸ್ಟಿಕ್ ತ್ಯಾಜ್ಯವನ್ನು ಎಸೆಯುವುದರಿಂದ ಇದು ಬ್ಲಾಕ್ ಆಗಿದೆ. ಇದರಿಂದ ನೀರು ಜಮೀನುಗಳಿಗೆ ನುಗ್ಗಿ ಬೆಳೆ ಹಾನಿ‌ ಆಗುತ್ತಿದೆ. ಆದ್ದರಿಂದ ಡ್ರೈನೇಜ್ ನೀರು ನಾಲಾಗೆ ಬಿಡುವುದನ್ನು ನಿಲ್ಲಿಸುವ ನಿಟ್ಟಿನಲ್ಲಿ ಸ್ವರಿತವಾಗಿ ಕ್ರಮ ವಹಿಸಬೇಕು ಎಂಬುದು ನಾಗರಿಕ ವಿಠ್ಠಲ ಪೋಳ ಆಗ್ರಹಿಸಿದ್ದಾರೆ.

ಉಗ್ರ ಹೋರಾಟದ ಎಚ್ಚರಿಕೆ: ಮಾಜಿ‌ ನಗರಸೇವಕ ಮನೋಹರ ಹಲಗೇಕರ್ ಮಾತನಾಡಿ, ಬಳ್ಳಾರಿ ನಾಲಾ ಸಮಸ್ಯೆ ಪರಿಹರಿಸುವಂತೆ ಅನೇಕ ವರ್ಷಗಳಿಂದ ನಾವು ಹೋರಾಟ ಮಾಡುತ್ತಿದ್ದೇವೆ. ಹೋದ ವರ್ಷ ಕಾಮಗಾರಿಗೆ ಮಂಜೂರಾತಿ ಸಿಕ್ಕಿತು ಅಂತಾ ಖುಷಿ ಆಗಿತ್ತು. ಆಗ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರಿಗೆ ನಾವು ಅಭಿನಂದನೆ ಸಲ್ಲಿಸಿದ್ದೆವು. ಆದರೆ, ಈವರೆಗೂ ಸಮೀಕ್ಷೆ ಸೇರಿ ಕಾಮಗಾರಿ ಆರಂಭಿಸುವ ಯಾವುದೇ ಪ್ರಕ್ರಿಯೆ ಶುರು ಆಗಿಲ್ಲ. ತಕ್ಷಣ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು. ಸಮೀಕ್ಷೆ ಮಾಡಿ, ಗಡಿ ಗುರುತು ಪಡಿಸಿ ಅಂದಾಜು 28 ಕಿ‌.ಮೀ. ಕಾಂಕ್ರೀಟ್ ಮೂಲಕ ಹೊಸದಾಗಿ ನಾಲಾ ಕಟ್ಟಬೇಕು. ಇಲ್ಲದಿದ್ದರೆ ಎಲ್ಲ ರೈತರು ಸೇರಿಕೊಂಡು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ವಡಗಾವಿ ರೈತ ಶಾಹಪುರಕರ್ ಮಾತನಾಡಿ, ಸತತವಾಗಿ ಮಳೆ ಆಗಿದ್ದರಿಂದ ಬಳ್ಳಾರಿ ನಾಲಾ ತುಂಬಿದೆ. ಅಲ್ಲದೇ ನಾಲಾದಲ್ಲಿ ಹೂಳು ತುಂಬಿದ್ದರಿದ ನಮ್ಮ‌ ಗದ್ದೆಗಳಲ್ಲಿ ಅಪಾರ ಪ್ರಮಾಣದಲ್ಲಿ ನೀರು ನಿಂತು 3 ಎಕರೆಯಲ್ಲಿ ಬೆಳೆದಿದ್ದ ಭತ್ತ ಹಾನಿಯಾಗಿದೆ. ಎಕರೆಗೆ 30 ಸಾವಿರ ರೂ. ಖರ್ಚು ಮಾಡಿದ್ದೆವು. ಈಗ ಎಲ್ಲವೂ ನೀರಲ್ಲಿ ಹೋಮ‌ ಮಾಡಿದಂತೆ ಆಯಿತು. ಈಗ ಮತ್ತೆ ಬಿತ್ತಲು ಬೀಜ ಸಿಗುತ್ತಿಲ್ಲ ಎಂದು ಅಲವತ್ತುಕೊಂಡರು.

 ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರನ್ನು ಸಂಪರ್ಕಿಸಿದಾಗ, ಕೊಳಚೆ ನೀರು ಸಂಸ್ಕರಣಾ ಘಟಕ ನಿರ್ಮಾಣಕ್ಕೆ ಶೀಘ್ರದಲ್ಲೇ ಅನುಮೋದನೆ ಸಿಗಲಿದೆ. ಆಗ ಡ್ರೈನೇಜ್ ನೀರು ಬಳ್ಳಾರಿ ನಾಲಾಗೆ ಸೇರುವುದು ತಪ್ಪಲಿದೆ. ಅಲ್ಲದೇ ಬೈಪಾಸ್ ಕಾಮಗಾರಿ ಪ್ರಗತಿಯಲ್ಲಿ ಇರುವುದಿಂದ ಸಮಸ್ಯೆ ಆಗಬಾರದು ಎಂಬ ಉದ್ದೇಶದಿಂದ ನಾಲಾ ನೀರು ಸರಳವಾಗಿ ಹರಿಯುವ ನಿಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಜೊತೆಗೂ ಚರ್ಚೆ ನಡೆದಿದೆ. ಜೊತೆಗೆ ಎನ್​​ಜಿ‌ಓ ಮೂಲಕ ಹೂಳು ತೆಗೆಯಲು ಕ್ರಮ ವಹಿಸಲಾಗುವುದು ಎಂದರು.‌


Spread the love

About Laxminews 24x7

Check Also

ಮಿರಜ್‌ನಲ್ಲಿ 1 ಕೋಟಿ ರೂಪಾಯಿ ಮೌಲ್ಯದ ನಕಲಿ ನೋಟುಗಳ ಜಪ್ತಿ

Spread the love ಚಿಕ್ಕೋಡಿ:ಮಹಾರಾಷ್ಟ್ರ- ಕರ್ನಾಟಕ ಗಡಿ ಭಾಗದಲ್ಲಿ ಇತ್ತಿಚಿಗೆ ವಿಶೇಷ ಕಾರ್ಯಾಚರಣೆ ನಡೆಸಿದ ಮಹಾರಾಷ್ಟ್ರ ಪೊಲೀಸರು, ಬರೋಬ್ಬರಿ 1 …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ