ಬೆಂಗಳೂರು: ಬಿಜೆಪಿ ಮನೆಯ ಸಚಿವಾಕಾಂಕ್ಷಿ ಹಕ್ಕಿಗಳಿಗೆ ಇವತ್ತು ಬೆಳಗ್ಗೆ ಇದ್ದ ನಿರೀಕ್ಷೆ, ಕಾತರ ಸಂಜೆ ಹೊತ್ತಿಗೆ ಇಳಿದಿತ್ತು. ಬೆಂಗಳೂರಿಗೆ ಆಗಮಿಸಿದ್ದ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಜತೆ ಸಿಎಂ ಯಡಿಯೂರಪ್ಪ ಚರ್ಚಿಸಿ ನಮ್ಮನ್ನ ನಾಳೆ ಬೆಳಗ್ಗೆಯೊಳಗೆ ಸಚಿವರಾಗಿ ಮಾಡೇಬಿಡ್ತಾರೆಂಬ ನಿರೀಕ್ಷೆ ಠುಸ್ ಆಗಿದೆ. ಕಾವೇರಿ ನಿವಾಸದಲ್ಲಿ ಮಧ್ಯಾಹ್ನ ಸಿಎಂ ಮತ್ತು ಅರುಣ್ ಸಿಂಗ್ ನಡುವಿನ ಸಂಪುಟ ವಿಸ್ತರಣೆ ಕುರಿತ ಮಾತುಕತೆ ವಿಫಲವಾಗಿದೆ. ಹೈಕಮಾಂಡ್ ಸಂಪುಟ ವಿಸ್ತರಣೆಗೆ ಒಪ್ಪಿಗೆ ಕೊಡದೇ ತನ್ನ ಎಂದಿನ ಧೋರಣೆ ಪ್ರದರ್ಶಿಸಿದೆ ಎಂದು ತಿಳಿದು ಬಂದಿದೆ.
ಕಾವೇರಿ ನಿವಾಸದಲ್ಲಿ ಅರುಣ್ ಸಿಂಗ್ ಜೊತೆ ಸಿಎಂ ಯಡಿಯೂರಪ್ಪ ಇಪ್ಪತ್ತು ನಿಮಿಷ ಕಾಲ ಮಾತುಕತೆ ನಡೆಸಿದರು. ಸಂಪುಟಕ್ಕೆ ಮೂವರು ವಲಸಿಗರ ಸೇರ್ಪಡೆಯ ಅನಿವಾರ್ಯತೆ ಬಗ್ಗೆ ಸಿಎಂ ಮನವರಿಕೆ ಮಾಡಿದ್ದರು. ವಲಸಿಗರ ಸೇರ್ಪಡೆಯಿಂದ ಮೂಲ ಬಿಜೆಪಿಗರಿಂದ ಅಸಮಧಾನ ಸೃಷ್ಟಿಯಾಗದಂತೆ ನೋಡಿಕೊಳ್ಳುವುದಾಗಿ ಸಿಎಂ ಭರವಸೆ ಕೊಟ್ಟಿದ್ದರು ಎನ್ನಲಾಗಿದೆ. ಸಿಎಂ ಅವರ ಮಾತುಗಳನ್ನ ಶಾಂತಿಯಿಂದ ಕೇಳಿಸಿಕೊಂಡ ಅರುಣ್ ಸಿಂಗ್ ಹೈಕಮಾಂಡ್ ಸದ್ಯಕ್ಕೆ ಈ ವಿಚಾರದಲ್ಲಿ ತಕ್ಷಣಕ್ಕೆ ನಿರ್ಧಾರ ಕೈಗೊಳ್ಳುವುದು ಅನುಮಾನ. ನಿಮ್ಮ ಭಾವನೆಗಳನ್ನು ವರಿಷ್ಠರ ಗಮನಕ್ಕೆ ತರೋದಾಗಿ ಹೇಳಿ ಅರುಣ್ ಸಿಂಗ್ ಕಾವೇರಿಯಿಂದ ನಿರ್ಗಮಿಸಿದರು ಎಂದು ಬಿಜೆಪಿ ಮೂಲಗಳು ತಿಳಿಸಿವೆ.