ಬೆಂಗಳೂರು,ಜು.13- ನಾಳೆ ರಾತ್ರಿಯಿಂದ ಜಾರಿಯಾಗುತ್ತಿರುವ ಎರಡನೆ ಹಂತದ ಲಾಕ್‍ಡೌನ್ ಘೋಷಣೆ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಹೊರಹೋಗುತ್ತಿರುವವರು ಮತ್ತು ಬೆಂಗಳೂರಿಗೆ ಬರುತ್ತಿರುವವರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಟೋಲ್‍ಗಳ ಬಳಿ ಇಂದು ಬೆಳಗ್ಗೆಯಿಂದಲೇ ಭಾರೀ ಪ್ರಮಾಣದಲ್ಲಿ ಟ್ರಾಫಿಕ್ ಜಾಮ್ ಉಂಟಾದ ಪರಿಣಾಮ ಸರ್ಕಾರ ಉಚಿತವಾಗಿ ವಾಹನಗಳನ್ನು ಬಿಡಲು ಸೂಚಿಸಿದೆ.
ಕೊರೋನಾ ನಿಯಂತ್ರಣಕ್ಕಾಗಿ ನಾಳೆ ರಾತ್ರಿ 8 ಗಂಟೆಯಿಂದ 8 ದಿನ ಲಾಕ್‍ಡೌನ್ ಘೋಷಣೆ ಮಾಡಿದ್ದು, ಊರುಗಳಿಗೆ ತೆರಳುವವರು ಮತ್ತು ಬೆಂಗಳೂರಿಗೆ ಬರುವವರಿಗೆ ಅವಕಾಶವನ್ನು ನೀಡಿದ ಹಿನ್ನೆಲೆಯಲ್ಲಿ ಜನ ಬಾರೀ ಸಂಖ್ಯೆಯಲ್ಲಿ ತೆರಳುತ್ತಿರುವ ಹಿನ್ನೆಲೆಯಲ್ಲಿ ಟೋಲ್‍ಗೇಟ್‍ಗಳ ಬಳಿ ಇಂದು ಬೆಳಗ್ಗೆಯಿಂದಲೇ ಗಂಟೆಗಟ್ಟಲೇ ಟ್ರಾಫಿಕ್ ಜಾಮ್ ಆಗಿದ್ದು ನೆಲಮಂಗಲದ ಟೋಲ್‍ಗೇಟ್, ನವಯುಗ ಟೋಲ್ ಹಾಗೂ ಏರ್ ಪೋರ್ಟ್ ರಸ್ತೆಯ ಟೋಲ್, ಅತ್ತಿಬೆಲೆ ಟ್ರೋಲ್‍ಗಳಲ್ಲಿ ಭಾರೀ ಸಂಖ್ಯೆಯಲ್ಲಿ ವಾಹನಗಳು ನಿಂತಿದ್ದವುಟೋಲ್ ದಾಟಿ ಬರಲು ಸುಮಾರು 2-3 ಗಂಟೆಗಳ ಕಾಲ ಜನ ಕಾಯಬೇಕಾಯಿತು. ಸಂಡೇ ಲಾಕ್‍ಡೌನ್ ಇದ್ದಿದ್ದರ ಪರಿಣಾಮ ನಿನ್ನೆ ಯಾರೂ ಹೊರ ಹೋಗಿರಲಿಲ್ಲ
ಮೂರ್ನಾಲ್ಕು ಗಂಟೆಗಳಿಂದ ಟ್ರಾಫಿಕ್ ಜಾಮ್ ಆದ ಹಿನ್ನೆಲೆಯಲ್ಲಿ ಹಲವೆಡೆ ಟ್ರಾಫಿಕ್ ಶುಲ್ಕವನ್ನು ರದ್ದು ಮಾಡಿ ವಾಹನಗಳನ್ನು ಸರಾಗವಾಗಿ ಬಿಡಲು ತೀರ್ಮಾನ ಕೈಗೊಳ್ಳಲಾಯಿತು. ಹಾಗಾಗಿ ಕೊಂಚ ಟ್ರಾಫಿಕ್ ಕಡಿಮೆಯಾಯಿತು ಎಂದು ತಿಳಿದು ಬಂತು.
ಮೊದಲ ಲಾಕ್‍ಡೌನ್ ಘೋಷಣೆಯಾದ ಸಂದರ್ಭದಲ್ಲಿ ಎಲ್ಲಾ ಟೋಲ್‍ಗಳನ್ನು ಬಂದ್ ಮಾಡಲಾಗಿತ್ತು. ಅಂತರರಾಜ್ಯ ಮತ್ತು ಅಂತರ ಜಿಲ್ಲಾ ಪ್ರವೇಶ ನಿರ್ಬಂಧಿಸಲು ಈ ಕ್ರಮ ಕೈಗೊಳ್ಳಲಾಗಿತ್ತು. ಲಾಕ್‍ಡೌನ್ ತೆರವಾದ ಸಂದರ್ಭದಲ್ಲಿ ಟೋಲ್‍ಗಳಲ್ಲಿ ಶುಲ್ಕ ವಸೂಲಿ ಪ್ರಾರಂಭವಾಯಿತು.
ಮತ್ತೊಂದು ಸುತ್ತಿನ ಲಾಕ್‍ಡೌನ್ ಘೋಷಣೆಯಾಗಿ ಭಾರೀ ಸಂಖ್ಯೆಯಲ್ಲಿ ಜನ ಪ್ರಯಾಣ ಬೆಳೆಸಿದ್ದು ಟ್ರಾಫಿಕ್ ಜಾಮ್ ಉಂಟಾದ ಹಿನ್ನೆಲೆಯಲ್ಲಿ ಸರ್ಕಾರ ಟೋಲ್ ಫ್ರೀ ಮಾಡಿದೆ. ನಾಳೆ ಸಂಜೆಯೊಳಗೆ ಒಳ ಬರುವವರು, ಹೊರ ಹೋಗುವವರಿಗೆ ಅವಕಾಶ ನೀಡಿದೆ.
ಇಂದು ಸಂಜೆ ಲಾಕ್‍ಡೌನ್ ಮಾರ್ಗಸೂಚಿ ಹೊರಬೀಳಲಿದೆ. ರಾಜಧಾನಿ ಬೆಂಗಳೂರು, ಬೆಂಗಳೂರು ಗ್ರಾಮಾಂತರ ಅಷ್ಟೇ ಅಲ್ಲದೇ ಇನ್ನೂ 12 ಜಿಲ್ಲೆಗಳಲ್ಲಿ ಲಾಕ್‍ಡೌನ್ ಘೋಷಣೆಯಾಗುವ ಸಾಧ್ಯತೆ ಇದೆ. ಕೊರೋನಾ ನಿಯಂತ್ರಣಕ್ಕೆ ಮತ್ತಷ್ಟು ಕಠಿಣ ನಿಯಮಗಳನ್ನು ಸರ್ಕಾರ ಜಾರಿಗೊಳಿಸಲಿದೆ.