ಕೊಪ್ಪಳ: ತುಂಗಭದ್ರಾ ಮಂಡಳಿ ಅಧ್ಯಕ್ಷ ಕೇಂದ್ರ ಸರ್ಕಾರದಿಂದ ನೇಮಕವಾಗುತ್ತಾರೆ. ಈಗ ಬಿಜೆಪಿ ಅಧಿಕಾರದಲ್ಲಿದೆ. ಅವರು ಏನು ಮಾಡಿದ್ದಾರೆ. ಜಲಾಶಯ ವಿಚಾರದಲ್ಲಿ ನಾವು ರಾಜಕೀಯ ಮಾಡುವುದಿಲ್ಲ. ಯಾರ ಮೇಲೂ ಗೂಬೆ ಕೂರಿಸುವುದಿಲ್ಲ. ರೈತರ ಪರ ಇದ್ದೇವೆ. ರೈತರನ್ನು, ನೀರನ್ನು ಹಾಗೂ ಜಲಾಶಯವನ್ನು ಉಳಿಸುತ್ತೇವೆ.
ರೈತರಿಗೆ ತೊಂದರೆ ಆಗದಂತೆ ನೋಡಿಕೊಳ್ಳುವ ಪ್ರಯತ್ನ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ತಾಲ್ಲೂಕಿನ ಬಸಾಪುರ ಬಳಿ ಏರ್ ಸ್ಟ್ರೀಪ್ ನಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿ ತೆಲಂಗಾಣ, ಆಂಧ್ರಪ್ರದೇಶ ಮತ್ತು ಕರ್ನಾಟಕದವದರು ಕೂಡ ಮಂಡಳಿಯಲಿ ಇರುತ್ತಾರೆ. ಬಿಜೆಪಿಯವರು ರಾಜಕೀಯವಾಗಿ ಟೀಕೆ ಮಾಡುತ್ತಾರೆ. ತುಂಗಭದ್ರಾ ಜಲಾಶಯದ 19ನೇ ಗೇಟಿನ ಚೈನ್ ಕಟ್ ಆಗಿ, ನೀರು ಹೋಗುತ್ತಿದೆ. ರಾಜ್ಯ ಸರ್ಕಾರದ ಹೊಣಗೇಡಿತನ ಎಂದರೆ ಏನು ಅರ್ಥ. ಅನುದಾನ ನೀಡುತ್ತೇವೆ ಅಷ್ಟೇ ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದರು.
ಜಲಾಶಯದಲ್ಲಿ 105 ಟಿಎಂಸಿ ಅಡಿ ನೀರು ಸಂಗ್ರಹವಾಗಿತ್ತು. ಅದರಲ್ಲಿ 60 ಟಿಎಂಸಿ ಅಡಿ ನೀರು ಬಿಡಬೇಕು. ರೈತರಿಗೆ ವ್ಯವಸಾಯಕ್ಕೆ ತೊಂದರೆ ಆಗುವುದಿಲ್ಲ. ಇನ್ನೂ ಮಳೆಗಾಲ ಇದ್ದು, ಜಲಾಶಯ ತುಂಬುವ ಭರವಸೆ ಇದೆ ಎಂದರು.