ಕಲಬುರಗಿ : ರಾಜ್ಯ ಸರ್ಕಾರ ಮರಾಠಾ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿರುವುದು ಭಾಷೆ ಗಳ ನಡುವೆ ಗೊಂದಲ ಸೃಷ್ಟಿಸಲು ಅಲ್ಲ. ಸಮುದಾಯಕ್ಕೆ ಆರ್ಥಿಕ ಬಲ ತುಂಬುವ ಉದ್ದೇಶವಾಗಿದೆ. ಅಭಿವೃದ್ಧಿ ಪ್ರಾಧಿಕಾರಕ್ಕೆ ವಿರೋಧ ಬೇಡವೆಂದು ಡಿಸಿಎಂ ಲಕ್ಷ್ಮಣ ಸವದಿ ಮನವಿ ಮಾಡಿಕೊಂಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಡಿ ವಿವಾದ ಮುಗಿದ ಅಧ್ಯಾಯವಾಗಿದೆ. ಬೆಳಗಾವಿ ವಿಚಾರವಾಗಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಉದ್ದಟತನದ ಮಾತು ಯಾರಿಗೂ ಹಿತವನ್ನು ತರುವುದಿಲ್ಲ. ಅವರು ಇತಿಹಾಸವನ್ನು ಒಮ್ಮೆ ತೆಗೆದು ನೋಡಬೇಕು ಎಂದು ಚಾಟಿ ಬಿಸಿದರು.
ಸಾವಿರಾರು ವರ್ಷಗಳಿಂದ ಈ ನೆಲದಲ್ಲಿ ನೆಲೆಸಿರುವ ಮರಾಠ ಸಮುದಾಯದ ಬಡವರಿಗೆ ಅನುಕೂಲವಾಗುವ ರೀತಿಯಲ್ಲಿ ಈ ತೀರ್ಮಾನವನ್ನು ಸರ್ಕಾರ ಕೈಗೊಂಡಿದೆ. ಕನ್ನಡ ಪ್ರಾಧಿಕಾರದ ರೀತಿಯಲ್ಲಿ ಮರಾಠಾ ಪ್ರಾಧಿಕಾರ ಅಲ್ಲ. ಮರಾಠರು ಈ ನೆಲದ ಮಕ್ಕಳು. ಅವರನ್ನು ನಾವು ಪ್ರೀತಿಸೋಣ. ಬೇರೆ ಸಮುದಾಯದವರನ್ನು ಪ್ರೀತಿಸುವ ರೀತಿಯಲ್ಲಿ ಮರಾಠಾ ಸಮುದಾಯವನ್ನು ಪ್ರೀತಿಸೋಣ ಹೇಳಿದರು.
ಇನ್ನು ಸಚಿವ ಸಂಪುಟ ವಿಚಾರವಾಗಿ ಮಾತನಾಡಿ, ಮುಖ್ಯಮಂತ್ರಿ ಪಕ್ಷದ ಅಧ್ಯಕ್ಷರನ್ನು ಭೇಟಿ ಮಾಡಿ ಬಂದಿದ್ದಾರೆ. ಪಕ್ಷದ ನಾಯಕರಾದ ಪ್ರಧಾನಿ ಮೋದಿ, ಅಮಿತ್ ಶಾ ಜತೆ ಚರ್ಚಿಸಿ, ತೀರ್ಮಾನ ತಿಳಿಸಲಿದ್ದಾರೆ. ನಾಲ್ಕೈದು ದಿನಗಳಲ್ಲಿ ಎಲ್ಲವು ತಿಳಿಯಲಿದೆ ಎಂದರು.
Laxmi News 24×7