Breaking News

ಬರ ಬಂದಾಗ ಬರುವುದಿಲ್ಲ, ಚುನಾವಣಾ ಪ್ರಚಾರಕ್ಕೆ ಮಾತ್ರ ತಪ್ಪಿಸುವುದಿಲ್ಲ’ ಮೋದಿ ರಾಜ್ಯ ಪ್ರವಾಸಕ್ಕೆ ಸಿಎಂ ಸಿದ್ದರಾಮಯ್ಯ ವ್ಯಂಗ್ಯ

Spread the love

ಬೆಂಗಳೂರು : ನೆರೆ ಬಂದಾಗ ಬರುವುದಿಲ್ಲ, ಬರ ಬಂದಾಗಲೂ ಬರುವುದಿಲ್ಲ, ಚುನಾವಣಾ ಪ್ರಚಾರಕ್ಕೆ ಬರುವುದನ್ನು ಮಾತ್ರ ತಪ್ಪಿಸುವುದಿಲ್ಲ. ಹೀಗಿದ್ದರೂ ನಿಮ್ಮ ಬರುವಿಕೆಗಾಗಿ ಆರುವರೆ ಕೋಟಿ ಕನ್ನಡಿಗರು ಕಾತರದಿಂದ ಕಾಯುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರ್ನಾಟಕಕ್ಕೆ ಸ್ವಾಗತ. ನೆರೆ ಬಂದಾಗ ಬರುವುದಿಲ್ಲ, ಬರ ಬಂದಾಗಲೂ ಬರುವುದಿಲ್ಲ, ಚುನಾವಣಾ ಪ್ರಚಾರಕ್ಕೆ ಬರುವುದನ್ನು ಮಾತ್ರ ತಪ್ಪಿಸುವುದಿಲ್ಲ. ಹೀಗಿದ್ದರೂ ನಿಮ್ಮ ಬರುವಿಕೆಗಾಗಿ ಆರುವರೆ ಕೋಟಿ ಕನ್ನಡಿಗರು ಕಾತರದಿಂದ ಕಾಯುತ್ತಿದ್ದಾರೆ. ಅವರಲ್ಲಿ ಒಂದಷ್ಟು ಪ್ರಶ್ನೆಗಳಿವೆ. ಆ ಪ್ರಶ್ನೆಗಳಿಗೆ ನಾಳೆಯ ನಿಮ್ಮ ಭಾಷಣದಲ್ಲಿ ನೀವು ಉತ್ತರ ನೀಡಬೇಕೆಂದು ಅವರ ಒತ್ತಾಯವಿದೆ. ಮೋದಿಯವರು ಬರಗಾಲದ ಕಷ್ಟಗಳಿಗೆ ನೆರವಾಗುತ್ತಾರೆ, ತೆರಿಗೆಯಲ್ಲಿ ಹೆಚ್ಚಿನ ಪಾಲು ಕೊಡುತ್ತಾರೆ. ವಿಶೇಷ ನೆರವಿನ ಭರವಸೆಯನ್ನು ಈಡೇರಿಸುತ್ತಾರೆ ಎನ್ನುವ ಅವರ ನಿರೀಕ್ಷೆಯನ್ನು ನಿಜ ಮಾಡುತ್ತೀರಾ? ಎಂದು ಪ್ರಶ್ನಿಸಿದ್ದಾರೆ.

ನರೇಂದ್ರ ಮೋದಿಯವರೇ ನಮ್ಮ ಕನ್ನಡಿಗ ಮತದಾರರು ನಿಮ್ಮ ಮೇಲೆ ಭರವಸೆ ಇಟ್ಟು ಮೊದಲ ಬಾರಿ ಹದಿನೇಳು, ಎರಡನೇ ಬಾರಿ ಇಪ್ಪತ್ತೈದು ಸಂಸದರನ್ನು ನಿಮ್ಮ ಪಕ್ಷದಿಂದ ಗೆಲ್ಲಿಸಿ ಲೋಕಸಭೆಗೆ ಕಳಿಸಿ ನಿಮ್ಮನ್ನು ಪ್ರಧಾನಮಂತ್ರಿ ಮಾಡಿದರು. ನಿಮ್ಮ ಮೇಲೆ ಇಷ್ಟೊಂದು ಪ್ರೀತಿ-ಅಭಿಮಾನ ತೋರಿದ ನಮ್ಮ ಮತದಾರರಿಗೆ ಕಳೆದ ಹತ್ತು ವರ್ಷಗಳಲ್ಲಿ ನೀವು ಮಾಡಿದ ಸಾಧನೆಯನ್ನು ತಿಳಿಸುವುದು ಬೇಡವೇ? ಈ ಬಾರಿಯಾದರೂ ಅದೇ ಹಳೆಯ ಹಿಂದು-ಮುಸ್ಲಿಮ್, ಭಾರತ -ಪಾಕಿಸ್ತಾನ, ಮಂದಿರ -ಮಸೀದಿ ಬಗೆಗಿನ ಟೇಪ್ ರೆಕಾರ್ಡರ್ ಪ್ಲೇ ಮಾಡುವುದನ್ನು ಕಡಿಮೆ ಮಾಡಿ ನಿಮ್ಮ ಹತ್ತು ವರ್ಷಗಳ ಸಾಧನೆಯ ಬಗ್ಗೆ ಹತ್ತು ನಿಮಿಷ ಮಾತನಾಡುತ್ತೀರಾ? ನಿರುದ್ಯೋಗ, ಬೆಲೆ ಏರಿಕೆ ಮತ್ತು ಭ್ರಷ್ಟಾಚಾರಗಳಿಗೆ ಸಂಬಂಧಿಸಿದಂತೆ ನಿಮ್ಮ ಸರ್ಕಾರದ ಮೇಲಿನ ಆರೋಪಗಳಿಗೆ ಉತ್ತರ ನೀಡುತ್ತೀರಾ? ಎಂದು ಪ್ರಶ್ನಿಸಿದ್ದಾರೆ.

ಚುನಾವಣಾ ಕಾಲದಲ್ಲಿ ರಾಜಕೀಯ ಪಕ್ಷಗಳು ಬಿಡುಗಡೆಗೊಳಿಸುವ ಪ್ರಣಾಳಿಕೆ ಎನ್ನುವುದು ಕೇವಲ ಭರವಸೆಗಳ ಕಂತೆ ಅಲ್ಲ, ಅದು ಮತದಾರನಿಗೆ ಕೊಡುವ ಗ್ಯಾರಂಟಿ. ಚುನಾವಣೆಯಲ್ಲಿ ಆಯ್ಕೆಯಾದ ಪಕ್ಷ ಐದು ವರ್ಷಗಳ ನಂತರ ಪ್ರಣಾಳಿಕೆಯಲ್ಲಿ ಈಡೇರಿಸಲಾದ ಭರವಸೆಯ ಲೆಕ್ಕವನ್ನು ಮತದಾರರಿಗೆ ಕೊಡಬೇಕು. ಈ ಕೆಲಸವನ್ನು ಒಬ್ಬ ಮುಖ್ಯಮಂತ್ರಿಯಾಗಿ ನಿಷ್ಠೆ ಮತ್ತು ಜವಾಬ್ದಾರಿಯಿಂದ ಮಾಡುತ್ತಾ ಬಂದ ನನಗೆ ನಿಮ್ಮ ವೈಫಲ್ಯವನ್ನು ಪ್ರಶ್ನಿಸುವ ನೈತಿಕ ಅಧಿಕಾರ ಇದೆ ಎಂದು ತಿಳಿದುಕೊಂಡಿದ್ದೇನೆ. ನೀವು ಹಿಂದಿನ ಚುನಾವಣೆಯ ಪ್ರಣಾಳಿಕೆಯ ಲೆಕ್ಕವನ್ನು ಕೊಟ್ಟಿಲ್ಲ, ಈ ಚುನಾವಣೆಯ ಪ್ರಣಾಳಿಕೆಯನ್ನು ಇನ್ನೂ ಬಿಡುಗಡೆಗೊಳಿಸಿಲ್ಲ. ಇದು ಮತದಾರರ ಬಗೆಗಿನ ನಿರ್ಲಕ್ಷ್ಯ ಮಾತ್ರವಲ್ಲ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆ ಬಗೆಗಿನ ತಿರಸ್ಕಾರವೂ ಹೌದಲ್ಲವೇ? ಎಂದರು.

ಬರಪರಿಹಾರ ಮತ್ತು ತೆರಿಗೆ ಹಂಚಿಕೆಯಲ್ಲಿ ಆಗಿರುವ ಅನ್ಯಾಯಕ್ಕೆ ಸಂಬಂಧಿಸಿದಂತೆ ನಿಮ್ಮದೇ ಸರ್ಕಾರದ ಗೃಹ ಸಚಿವ Amit Shah ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಿರ್ಲಜ್ಜತೆಯಿಂದ ಸುಳ್ಳುಗಳನ್ನು ಹೇಳಿಹೋಗಿದ್ದಾರೆ. ಕಳೆದ ವರ್ಷದ ಡಿಸೆಂಬರ್ 19ರಂದು ನಾನೇ ಖುದ್ದಾಗಿ ನಿಮ್ಮಲ್ಲಿಗೆ ಬಂದು ಬರಪರಿಹಾರ ಬಿಡುಗಡೆಗೊಳಿಸುವಂತೆ ಮನವಿ ಮಾಡಿದ್ದೆ. ಡಿಸೆಂಬರ್ 23ಕ್ಕೆ ತಮ್ಮ ಅಧ್ಯಕ್ಷತೆಯ ಉನ್ನತಾಧಿಕಾರ ಸಮಿತಿಯ ಸಭೆ ನಡೆಸಿ ತೀರ್ಮಾನಿಸುವುದಾಗಿ ಗೃಹಸಚಿವರೇ ಆಶ್ವಾಸನೆ ನೀಡಿದ್ದರು. ಹೀಗಿದ್ದರೂ ಬರಪರಿಹಾರ ಕೋರಿ ವಿಳಂಬವಾಗಿ ಮನವಿ ಮಾಡಿದ್ದೆವು ಎಂದು ಹೇಳುವುದು ಸುಳ್ಳಲ್ಲವೇ ಪ್ರಧಾನಿಗಳೇ?

ಕರ್ನಾಟಕ ಸರ್ಕಾರ ಬರಪರಿಹಾರ ಕೋರಿ ವಿಳಂಬವಾಗಿ ಮನವಿ ಸಲ್ಲಿಸಿರುವ ಕಾರಣದಿಂದಾಗಿ ಚುನಾವಣಾ ಆಯೋಗ ಪರಿಹಾರ ಬಿಡುಗಡೆಗೆ ಅನುಮತಿ ನೀಡಿಲ್ಲ ಎಂದು ಹಣಕಾಸು ಸಚಿವೆ Nirmala Sitharaman ಹೇಳಿದ್ದಾರೆ. ಬರಪರಿಹಾರ ಕೋರಿ ನಮ್ಮ ಸರ್ಕಾರ ಕೇಂದ್ರ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದ್ದು ಕಳೆದ ವರ್ಷದ ಸೆಪ್ಟೆಂಬರ್ 23ರಂದು, ಲೋಕಸಭಾ ಚುನಾವಣೆ ಘೋಷಣೆಯಾಗಿದ್ದು ಮಾರ್ಚ್ 16ರಂದು. ರಾಜ್ಯ ಸರ್ಕಾರದ ಒಂದು ಮನವಿ ಪತ್ರವನ್ನು ಪರಿಶೀಲಿಸಿ ನಿರ್ಧಾರ ಕೈಗೊಳ್ಳಲು ಐದು ತಿಂಗಳು ಬೇಕೇ ಪ್ರಧಾನಿಗಳೇ? ಇದೇನಾ ನೀವು ಹೇಳುವ “Less Government , More Governance?” ಎಂದು ಹೇಳಿದ್ದಾರೆ.


Spread the love

About Laxminews 24x7

Check Also

ಬಾನು ಮುಷ್ತಾಕ್ ಆಯ್ಕೆಯನ್ನು ಧರ್ಮಾಂದರು ಮಾತ್ರ ವಿರೋಧಿಸುತ್ತಾರೆ: ಸಿಎಂ ಸಿದ್ದರಾಮಯ್ಯ

Spread the loveಮೈಸೂರು: “ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರ ಆಯ್ಕೆ ವಿಚಾರದಲ್ಲಿ ಬಿಜೆಪಿ ನಾಯಕರು ಕುಂಟು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ