ಹುಬ್ಬಳ್ಳಿ: ‘ಧಾರವಾಡದ ಪೈಲ್ವಾನ್ರ ಅಂದ್ರ ಹಗರಂತ ಮಾಡಿದ್ರೇನ..? ಕೊಲ್ಹಾಪುರ, ಪುಣಾ, ಬಾಂಬೆ.. ಹಿಂಗ ಎಲ್ಲಿಗೇ ಕುಸ್ತಿ ಆಡಾಕ ಹೋದ್ರ ಕಣದಾಗ ನಂಬರ್ ಹಚ್ಚಲಾರದ ಬರ್ತಿರಲಿಲ್ಲ. ಕುಸ್ತಿಗಿ ರಾಜ್ಯದಾಗ ಧಾರವಾಡ ಜಿಲ್ಲಾ ಹೆಸರಾಗಿತ್ತ.. ಆದ್ರ ಈಗ ಹಂಗ ಉಳಿದಿಲ್ಲರೀ’…!

ಹೀಗೆ ನೋವಿನಿಂದ ಹೇಳುತ್ತಾರೆ ಕುಸ್ತಿ ಪೈಲ್ವಾನರು. ನಿರ್ವಹಣೆ ಕೊರತೆಯಿಂದ ಪಾಳು ಬಿದ್ದು ಇತಿಹಾಸದ ಪುಟ ಸೇರುತ್ತಿರುವ ಗರಡಿ ಮನೆಗಳೇ ಇದಕ್ಕೆ ಕಾರಣ ಎಂಬುದು ಅವರ ಬೇಸರ.
ಗ್ರಾಮೀಣ ಪ್ರದೇಶದಲ್ಲಿ ಈ ಹಿಂದೆ ಮನೆಗೊಬ್ಬರು ಪೈಲ್ವಾನರು, ಓಣಿಗೊಂದು ಗರಡಿ ಮನೆ ಇತ್ತು. ಆದರೆ ಆಧುನಿಕತೆ ಪ್ರಭಾವದಿಂದ ಈ ಸಂಖ್ಯೆ ಕ್ರಮೇಣ ಕ್ಷೀಣಿಸಿದೆ. ಇದೀಗ ತಾಲ್ಲೂಕಿಗೆ ಒಂದಿಬ್ಬರು ಪೈಲ್ವಾನರ ಹೆಸರು ಕೇಳಿಬಂದರೆ, ಅಲ್ಲೊಂದು, ಇಲ್ಲೊಂದು ಗರಡಿಮನೆಗಳು ಮಾತ್ರ ಬಳಕೆಗೆ ಯೋಗ್ಯವಾಗಿವೆ.
ಗರಡಿ ಮನೆಗಳಿಗೇ ಹೆಸರುವಾಸಿ ಯಾಗಿದ್ದ ಹುಬ್ಬಳ್ಳಿಯ ಉಣಕಲ್ ಗ್ರಾಮದಲ್ಲಿ ಈ ಹಿಂದೆ 13 ಗರಡಿ ಮನೆಗಳಿದ್ದವು. ಆದರೆ, ಈ ಪೈಕಿ ಒಂದೇ ಉಳಿದಿದೆ. ಹೀಗೆ ಜಿಲ್ಲೆಯಲ್ಲಿನ 150ಕ್ಕೂ ಹೆಚ್ಚು ಗರಡಿ ಮನೆಗಳಲ್ಲಿ ಸದ್ಯ ತಾಲೀಮು ಸದ್ದು ನಿಂತುಹೋಗಿದೆ. 50 ರಿಂದ 60 ಗರಡಿಮನೆಗಳು ಮಾತ್ರ ಬಳಕೆಯಲ್ಲಿವೆ.
Laxmi News 24×7