ಧಾರವಾಡ: ಕೆ.ಎಸ್. ಈಶ್ವರಪ್ಪ ಅವರು ಹಿರಿಯ ನಾಯಕ, ಅವರೊಬ್ಬ ಬದ್ಧತೆ ಇರುವ ವ್ಯಕ್ತಿ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸೋಮವಾರ ಪ್ರತಿಕ್ರಿಯೆ ನೀಡಿದ್ದಾರೆ.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ,ಮಾಜಿ ಸಿಎಂ ಡಿ.ವಿ. ಸದಾನಂದಗೌಡ ಪಕ್ಷ ಬಿಟ್ಟು ಹೋಗುತ್ತಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ‘ಈ ಬಾರಿ ನಮ್ಮ ಪಕ್ಷದಿಂದ ಯಾರೇ ಅಭ್ಯರ್ಥಿಯಾಗಿ ನಿಂತರೂ ಗೆಲ್ಲುತ್ತಾರೆ.
ಹೀಗಾಗಿ ಪಕ್ಷದಲ್ಲಿ ಬಹಳಷ್ಟು ಜನ ಆಕಾಂಕ್ಷಿಗಳು ಹುಟ್ಟಿಕೊಂಡಿದ್ದಾರೆ. ಟಿಕೆಟ್ ಸಿಗದೇ ಇರುವವರು ಅಸಮಾಧಾನಗೊಂಡಿದ್ದಾರೆ. ಅಸಮಾಧಾನಿತರೊಂದಿಗೆ ಮಾತುಕತೆ ನಡೆದಿದೆ. ಎಲ್ಲೆಲ್ಲಿ ಅವಶ್ಯಕತೆ ಇದೆಯೋ ಅಲ್ಲೆಲ್ಲ ನಾನೂ ಮಾತುಕತೆ ನಡೆಸಿದ್ದೇನೆ. ಈಶ್ವರಪ್ಪನವರ ಜತೆಗೂ ನಮ್ಮ ಪಕ್ಷದ ವರಿಷ್ಠರು ಮಾತನಾಡುತ್ತಿದ್ದಾರೆ. ಈಶ್ವರಪ್ಪ ನಮ್ಮ ಪಕ್ಷದ ಹಿರಿಯ ನಾಯಕ, ಬದ್ಧತೆ ಇರುವ ವ್ಯಕ್ತಿ” ಎಂದರು.
ಲೋಕಸಭಾ ಚುನಾವಣೆಗೆ ಧಾರವಾಡ ಕ್ಷೇತ್ರದಲ್ಲಿ ಜನರ ಸ್ಪಂದನೆ ಉತ್ತಮವಾಗಿವೆ. ಪ್ರಧಾನಿ ಮೋದಿ ಸರಕಾರದಿಂದ ಆದ ಕೆಲಸಗಳು ಹಾಗೂ ನಮ್ಮ ಕ್ಷೇತ್ರದಲ್ಲಾದ ಕೆಲಸಗಳ ಬಗ್ಗೆ ಜನರೇ ಹೇಳುತ್ತಿದ್ದಾರೆ. ಹೀಗಾಗಿ ಈ ಬಾರಿ ನಾಲ್ಕು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಬಿಜೆಪಿ ಗೆಲ್ಲುವ ವಿಶ್ವಾಸವಿದೆ ಎಂದರು.
ಬಿಜೆಪಿಗೆ ಮತ ಹಾಕಲು ಮತದಾರರು ತುದಿಗಾಲ ಮೇಲೆ ನಿಂತಿದ್ದಾರೆ. ಪ್ರಚಾರಕ್ಕೆ ಹೆಚ್ಚಿನ ಸಮಯ ಸಿಕ್ಕಿದೆ. ಆದರೆ, ಮತದಾನದ ಅವಧಿಯೇ ದೂರ ಆದಂತಾಗಿದೆ. ಅದೆಲ್ಲವನ್ನೂ ಬಿಟ್ಟರೆ ಉಳಿದ ಕೆಲಸ ಸುಗಮವಾಗಿ ಸಾಗಿದೆ. ಧಾರವಾಡ ಅಷ್ಟೇ ಅಲ್ಲ ಬೇರೆ ಬೇರೆ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿ ಯಾರು ಎಂಬುದು ಇನ್ನೂ ಗೊತ್ತಾಗಿಲ್ಲ. ಹೀಗಾಗಿ ಕಾಂಗ್ರೆಸ್ ಕಾರ್ಯಕರ್ತರು ಹತಾಶರಾಗಿದ್ದಾರೆ ಎಂದರು.