ನವದೆಹಲಿ: ಲೋಕಸಭಾ ಚುನಾವಣೆ ಎದುರಾಗುತ್ತಿದ್ದಂತೆಯೇ ದೇಶಾದ್ಯಂತ ರಾಜಕೀಯ ಸಮೀಕರಣಗಳು ಬದಲಾಗತೊಡಗಿವೆ. ಸಹಜವಾಗಿಯೇ ಇದು ಹಲವು ರೀತಿಗಳಲ್ಲಿ ತನ್ನದೇ ಆದ ಪರಿಣಾಮಗಳನ್ನು ಹೊಂದಿರಲಿದೆ. ಈ ಪೈಕಿ ಬಿಹಾರಕ್ಕೆ ಸಂಬಂಧಿಸಿದ ನ್ಯಾ. ರೋಹಿಣಿ ಸಮಿತಿ ವರದಿಯೂ ಸೇರಿದೆ.
ಬಿಹಾರದಲ್ಲಿ ನಿತೀಶ್ ಕುಮಾರ್ ಸರ್ಕಾರ, ಎನ್ ಡಿಎ ಮೈತ್ರಿಕೂಟ ಸೇರಿದ್ದು, ನರೇಂದ್ರ ಮೋದಿ ಸರ್ಕಾರ ನ್ಯಾ.ರೋಹಿಣಿ ಸಮಿತಿ ವರದಿಯನ್ನು ನಿರ್ಲಕ್ಷ್ಯ ವಹಿಸಿರುವಂತೆ ತೋರುತ್ತಿದೆ. ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳೊಂದಿಗೆ ಸೇರಿ ಸರ್ಕಾರ ರಚಿಸಿದ್ದ ನಿತೀಶ್ ಕುಮಾರ್ ನೇತೃತ್ವದ ರಾಜ್ಯ ಸರ್ಕಾರ ಜಾತಿ ಗಣತಿ ವರದಿಯನ್ನು ಪ್ರಕಟಿಸಿತ್ತು. ಇದಕ್ಕೆ ಪ್ರತಿಯಾಗಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಒಬಿಸಿಯ ಉಪ ಪಂಗಡಗಳಿಗೆ ಸಂಬಂಧಿಸಿದ ನ್ಯಾ.ರೋಹಿಣಿ ಸಮಿತಿ ವರದಿಯನ್ನು ಜಾರಿಗೆ ತರುತ್ತದೆ ಎಂದು ವಿಶ್ಲೇಷಿಸಲಾಗಿತ್ತು.
ಹಿಂದುಳಿದ ಜಾತಿಗಳ ಜನಸಂಖ್ಯೆಯನ್ನು 63% ಎಂದು ಸೂಚಿಸಿದ ಬಿಹಾರ ಜಾತಿಯ ದತ್ತಾಂಶವು ರಾಷ್ಟ್ರವ್ಯಾಪಿ ಜಾತಿ ಗಣತಿ ಮತ್ತು ಹಿಂದುಳಿದ ವರ್ಗಗಳಿಗೆ ಮೀಸಲಾತಿಯ ಮರುಪರಿಶೀಲನೆಗಾಗಿ ಪ್ರತಿಪಕ್ಷಗಳಿಂದ ಹೊಸ ಬೇಡಿಕೆಯನ್ನು ಹುಟ್ಟುಹಾಕಿತ್ತು.