ಬಾಗಲಕೋಟೆ: ಸಿದ್ದರಾಮಯ್ಯ ಸರ್ಕಾರದಲ್ಲಿ ಅಧಿಕಾರಿಗಳಿಗೆ, ಶಾಸಕರಿಗೆ ಪಗಾರ ಕೊಡಲು ಹಣವಿಲ್ಲ ಎಂದು ಸಂಸದ ಅನಂತಕುಮಾರ ಹೆಗಡೆ ಮಾಡಿದ ಟೀಕಾಪ್ರಹಾರಕ್ಕೆ ಪ್ರತಿಕ್ರಿಯಿಸಿದ ಸಚಿವ ಹೆಚ್.ಕೆ. ಪಾಟೀಲ್, ಯಾವ ಶಾಸಕ ಪಗಾರ ಇಲ್ಲದೇ ಇದ್ದಾರೆ? ಹೇಳಿ ನೋಡೋಣ ಎಂದು ಹೇಳಿದ್ದಾರೆ.
ಬಾಗಲಕೋಟೆಯ ಬಾದಾಮಿ ತಾಲೂಕಿನ ಹೂಲಗೇರಿ ಗ್ರಾಮದಲ್ಲಿ ಮಾತನಾಡಿದ ಸಚಿವ ಹೆಚ್.ಕೆ. ಪಾಟೀಲ್, ಯಾವ ಶಾಸಕ ಪಗಾರ ಇಲ್ಲದೆ ಇದ್ದಾರೆ ಹೇಳಿ? ನಾನು ಮಂತ್ರಿ ಇದ್ದೇನೆ, ಇಲ್ಲೇ ಶಾಸಕರು ಸಹ ಇದ್ದಾರೆ. ನಮ್ಮ ಮಾಜಿ ಶಾಸಕರು ಪಿಂಚಣಿ ಪಡೆಯುತ್ತಿದ್ದಾರೆ. ಕೇಳ್ರಿ ಇವರ ಸಂಬಳ ಸ್ಟಾಪ್ ಆಗಿದೆಯಾ ಅಂತ. ಎರಡು ಸಾವಿರ ರೂ. ಏನು ನಮ್ಮ ಜನರಿಗೆ ಒಂದನೇ ತಾರೀಖಿಗೆ ಹಣ ತಲುಪುತ್ತಿದೆ ಅಲ್ವಾ, ಅದನ್ನು ಸಹಿಸೋದಕ್ಕೆ ಆಗ್ತಿಲ್ಲ ಇವರಿಗೆ ಅಷ್ಟೇ ಎಂದರು.
ಸಿದ್ದರಾಮಯ್ಯ ಅವರಿಗೆ ಸಿದ್ದರಾಮುಲ್ಲಾಖಾನ್ ಎಂದು ವ್ಯಂಗ್ಯವಾಡಿದ ಅನಂತಕುಮಾರ ಹೆಗಡೆ ವಿಚಾರಕ್ಕೆ ಸ್ಪಂದಿಸಿದ ಸಚಿವರುಮ, ಅದು ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ಅತ್ಯಂತ ದುರ್ದೈವ, ಸಾರ್ವಜನಿಕ ಬದುಕಿನಲ್ಲಿ ಇರುವವರು ಇಂತಹ ಭಾಷೆ ಬಳಸಬಾರದು. ಸಮಾಜವನ್ನು ಸುಧಾರಣೆ ಕಡೆ ಒಯ್ಯಬೇಕೇ ಹೊರತು, ಅಲ್ಲಿ ಸಮಾಧಾನವನ್ನು ಕೆದಕಿ ಅಗೌರವದ ವಾತಾವರಣ ಸೃಷ್ಟಿ ಮಾಡಿದರೆ ಅದು ನಿಮ್ಮ ಮೈಮೇಲೆ ಬರುತ್ತದೆ ಎಂಬ ಎಚ್ಚರಿಕೆ ಇರಲಿ ಎಂದು ತಿರುಗೇಟು ನೀಡಿದರು.