ಗಂಗಾವತಿ: ವಾಣಿಜ್ಯ ನಗರಿ ಗಂಗಾವತಿಯನ್ನು ಕೇಂದ್ರವನ್ನಾಗಿಟ್ಟುಕೊಂಡು ನೂತನ ಕಿಷ್ಕಿಂಧಾ ಜಿಲ್ಲೆ ರಚಿಸಬೇಕು ಎಂದು ಒತ್ತಾಯಿಸಿ, (Koppala News) ರಾಜ್ಯ ಸರ್ಕಾರದ ಗಮನ ಸೆಳೆಯಲು ಇಲ್ಲಿನ ಸಂಕಲ್ಪ ಪದವಿ ಮತ್ತು ಪದವಿಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ವಿಭಿನ್ನ ಅಭಿಯಾನ (Campaign) ಆರಂಭಿಸಿದ್ದಾರೆ.
ಈ ಕುರಿತು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ನಾಗರಾಜ್ ಗುತ್ತೇದಾರ, ಕಾಲೇಜಿನ ವಿದ್ಯಾರ್ಥಿಗಳು ಸರ್ಕಾರಕ್ಕೆ ಸಾವಿರ ಪತ್ರ ಎಂಬ ಅಭಿಯಾನ ಆರಂಭಿಸಿದ್ದು, ಫೆ.10 ರಂದು ಶನಿವಾರ ನಗರದ ನ್ಯಾಯಾಲಯದ ಮುಂಭಾಗದಲ್ಲಿರುವ ಪ್ರಧಾನ ಅಂಚೆ ಕಚೇರಿಯಲ್ಲಿ ಸಾಮೂಹಿಕವಾಗಿ ಸರ್ಕಾರಕ್ಕೆ ಪತ್ರ ಕಳುಹಿಸಿ ಕೊಡಲಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹಾಗೂ ಕಂದಾಯ ಸಚಿವ ಕೃಷ್ಣೇಭೈರೇಗೌಡ ಅವರಿಗೆ ವಿದ್ಯಾರ್ಥಿಗಳೇ ತಮ್ಮ ಸ್ವ ಹಸ್ತಾಕ್ಷರಗಳಿಂದ ಬರೆದಿರುವ ಪ್ರತ್ಯೇಕ ಪೋಸ್ಟ್ ಮಾಡಲಿದ್ದಾರೆ. ಈ ಮೂಲಕ ಗಂಗಾವತಿಯನ್ನು ನೂತನ ಜಿಲ್ಲೆಯಾಗಿ ಘೋಷಿಸಬೇಕೆಂಬ ವಿದ್ಯಾರ್ಥಿಗಳ ಚಳುವಳಿಗೆ ಚಾಲನೆ ನೀಡಲಿದ್ದಾರೆ ಎಂದರು.
ಹಿರಿಯ ಸಾಹಿತಿ, ಉಪನ್ಯಾಸಕ ಪವನಕುಮಾರ ಗುಂಡೂರು ಮಾತನಾಡಿ, ನೂತನ ಕಿಷ್ಕಿಂಧಾ ಜಿಲ್ಲೆ ರಚಿಸಬೇಕೆಂಬ ಕೂಗು ಈಗಾಗಲೆ ಆರೇಳು ತಿಂಗಳಿಂದ ಬಲವಾಗಿ ಕೇಳಿ ಬರುತ್ತಿದೆ. ಈ ಕೂಗಿಗೆ ಬೆಂಬಲವಾಗಿ ವಿದ್ಯಾರ್ಥಿಗಳು ಸರ್ಕಾರಕ್ಕೆ ಸಾವಿರ ಪತ್ರ ಅಭಿಯಾನ ಹಮ್ಮಿಕೊಂಡಿದ್ದಾರೆ.