ಬೆಂಗಳೂರು, ಜ.8: ನಗರದಿಂದ ಕಾಂಚೀಪುರಂನಲ್ಲಿರುವ ಓಂ ಶಕ್ತಿ ದೇವಸ್ಥಾನಕ್ಕೆಕೆಎಸ್ಆರ್ಟಿಸಿ (KSRTC)ಸ್ಪೆಷಲ್ ಬಸ್ ಮೂಲಕ ತೆರಳಿದ್ದ ಓಂ ಶಕ್ತಿ ಮಾಲಾಧಾರಿಗಳು ಬಸ್ ಸೋರಿಕೆಯಿಂದ ಪರದಾಡುವಂತಾಗಿದೆ. ಬಸ್ ಬುಕ್ ಮಾಡಿದ ಭಕ್ತರಿಗೆ ಸಾರಿಗೆ ಇಲಾಖೆ ಡಕೋಟ ಬಸ್ ಕೊಟ್ಟಿರುವುದರಿಂದ ಭಕ್ತರು ಪರದಾಡುವಂತಾಗಿದೆ.
ಚೆನ್ನೈ, ಕಾಂಚೀಪುರಂ ಸೇರಿದಂತೆ ತಮಿಳುನಾಡಿನ ಹಲವೆಡೆ ಭಾರೀ ಮಳೆಯಾಗುತ್ತಿದೆ. ಆದರೆ, ಬೆಂಗಳೂರಿನಿಂದ ಓಂ ಶಕ್ತಿ ದೇವಾಲಯಕ್ಕೆ ಭಕ್ತರು ಹೋಗಿದ್ದ ಕೆಎಸ್ಆರ್ಟಿಸಿ ಬಸ್ ಗುಜರಿಯಾಗಿದ್ದರಿಂದ ಮಳೆ ನೀರು ಸೋರಿಕೆಯಾಗುತ್ತಿದೆ.
ಬಸ್ ಒಳಗೆ ಮಳೆ ನೀರು ಸೋರುತ್ತಿದ್ದರೂ ಬಸ್ ಚಾಲಕ ಕ್ಯಾರೇ ಆನ್ನುತ್ತಿಲ್ಲ. ಮಳೆ ನೀರು ಮೈಮೇಲೆ ಬೀಳುತ್ತಿದ್ದರಿಂದ ಕುಳಿತುಕೊಳ್ಳಲು ಪರದಾಡುತ್ತಿದ್ದ ಭಕ್ತರು, ಚಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬೆಂಗಳೂರಿನಿಂದ ಕೆಎಸ್ಆರ್ಟಿಸಿ ಬಸ್ ಬುಕ್ ಮಾಡಿಕೊಂಡು ಹೋಗಿದ್ದರು.
ಕರ್ನಾಟಕದ ಕೆಎಸ್ಆರ್ಟಿಸಿ ದೇಶದಲ್ಲೇ ಬೆಸ್ಟ್ ಸಾರಿಗೆ ಎನ್ನುವ ಹೆಗ್ಗಳಿಕೆ ಪಡೆದುಕೊಂಡಿದ್ದರೂ ರಾಜ್ಯದಲ್ಲಿ ಸಂಚರಿಸುವ ಹಲವು ಕೆಎಸ್ಆರ್ಟಿಸಿ ಹಾಗೂ ಬಿಎಂಟಿಸಿ ಬಸ್ಗಳು ಗುಜರಿಯಾಗಿವೆ. ಮೇಲ್ಛಾವಣಿಯಲ್ಲಿ ತೂತುಗಳಿದ್ದು, ಕೆಲವೊಂದು ಕಿಟಕಿಗಳಿಗೆ ಸರಿಯಾದ ಗ್ಲಾಸ್ ಕೂಡ ಇಲ್ಲ. ಇದರಿಂದಾಗಿ ಮಳೆಗಾಳದಲ್ಲಿ ಪ್ರಯಾಣಿಸುವಾಗ ನೀರು ಒಳಗೆ ಬಂದು ಜನರು ಪರದಾಡುತ್ತಿದ್ದಾರೆ.
ರಾಜ್ಯದಲ್ಲಿ ನಿಗದಿತ ಕಿಲೋ ಮೀಟರ್ಗಿಂತಲೂ ಹೆಚ್ಚು ಸಂಚರಿಸಿದ ಗುಜರಿ ಬಸ್ಗಳು ಈಗಲೂ ಸಂಚರಿಸುತ್ತಿವೆ. ಇದರಿಂದಾಗಿ ಅಪಘಾತಗಳು ನಡೆಯುತ್ತಿವೆ. ಹೀಗೆ ಗುಜರಿ ಬಸ್ನಿಂದ ಉಂಟಾದ ಅಪಘಾತದಲ್ಲಿ ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿದ್ದರು. ಈ ಪ್ರಕರಣ ಸಂಬಂಧ ವಿಚಾರಣೆ ನಡೆಸಿದ ಹೈಕೋರ್ಟ್, ಸಾಮರ್ಥ್ಯ ಕಳೆದುಕೊಂಡಿರುವ ಕೆಎಸ್ಆರ್ಟಿಸಿ ಬಸ್ಗಳನ್ನು ಗುಜರಿಗೆ ಹಾಕುವಂತೆ ಇತ್ತೀಚೆಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.
ಬಸ್ಗಳು ಸಂಚಾರಕ್ಕೆ ಅರ್ಹವಾಗಿದೆಯೇ ಎಂಬುದರ ಕುರಿತು ಪ್ರತಿ ವರ್ಷ ಪ್ರಾದೇಶಿಕ ಸಾರಿಗೆ ಅಧಿಕಾರಿಯಿಂದ ಸುಸ್ಥಿತಿ ದೃಢೀಕರಣ ಪತ್ರ ಬಡೆಯಬೇಕು. ದೃಢೀಕರಣ ಪತ್ರ ಪಡೆದ ಬಸ್ಗಳಿಗೆ ಮಾತ್ರ ರಸ್ತೆಗಿಳಿಸಲು ಅವಕಾಶ ಕೊಡಬೇಕು, ಸಮಸ್ಯೆ ಇರುವ ಬಸ್ಗಳನ್ನು ಸರಿಪಡಿಸಬೇಕು ಎಂದು ಕೋರ್ಟ್ ಆದೇಶದಲ್ಲಿ ತಿಳಿಸಿದೆ.