ಬೆಳಗಾವಿ: ”ಕಬ್ಬಿನ ತೂಕದಲ್ಲಿ ಆಗುತ್ತಿರುವ ಮೋಸವನ್ನು ನಿಯಂತ್ರಿಸಲು ರಾಜ್ಯದ ಸಕ್ಕರೆ ಕಾರ್ಖಾನೆಗಳಲ್ಲಿನ ತೂಕದ ಯಂತ್ರಗಳ ಡಿಜಿಟಲೀಕರಣಕ್ಕೆ ಸರ್ಕಾರ ಸೂಚನೆ ನೀಡಿದೆ.
ಈ ಸಂಬಂಧ ಕಾರ್ಖಾನೆಗಳ ಮಾಲೀಕರಿಗೆ 15 ದಿನಗಳ ಗಡುವು ನೀಡಲಾಗಿದೆ” ಎಂದು ಆಹಾರ, ನಾಗರಿಕ ಪೂರೈಕೆ ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಸಚಿವ ಕೆ ಹೆಚ್ ಮುನಿಯಪ್ಪ ತಿಳಿಸಿದರು.
ಸುವರ್ಣಸೌಧಲ್ಲಿ ಮಂಗಳವಾರ ಸಚಿವ ಶಿವಾನಂದ ಪಾಟೀಲ್, ಶಾಸಕ ಲಕ್ಷ್ಮಣ ಸವದಿ ಸೇರಿದಂತೆ ಕಬ್ಬು ಬೆಳೆಯುವ ಪ್ರದೇಶಗಳ ವ್ಯಾಪ್ತಿಯ ಜನಪ್ರತಿನಿಧಿಗಳು, ಕಾನೂನು ಮಾಪನಶಾಸ್ತ್ರ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ”ಪ್ರಸಕ್ತ ಹಂಗಾಮಿನಲ್ಲಿ 78 ಸಕ್ಕರೆ ಕಾರ್ಖಾನೆಗಳು ಕಬ್ಬು ಅರೆಯುತ್ತಿವೆ. ಇದರಲ್ಲಿ 24 ಮಾತ್ರ ಡಿಜಿಟಲ್ ತೂಕದ ಯಂತ್ರಗಳನ್ನು ಅಳವಡಿಸಿಕೊಂಡಿದ್ದು, ಉಳಿದ 54 ಕಾರ್ಖಾನೆಗಳು ಮುಂದಿನ ಹದಿನೈದು ದಿನಗಳಲ್ಲಿ ಡಿಜಿಟಲ್‌ಗೆ ಪರಿವರ್ತನೆ ಆಗಬೇಕು” ಎಂದು ತಿಳಿಸಿದರು.