ಅಹಮದಾಬಾದ್ (ಗುಜರಾತ್): ಆಸ್ಟ್ರೇಲಿಯಾ ತಂಡ 6ನೇ ಬಾರಿಗೆ ಏಕದಿನ ವಿಶ್ವಕಪ್ ಗೆದ್ದುಕೊಂಡಿದೆ.
ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ ಫೈನಲ್ನಲ್ಲಿ ಭಾರತ ನೀಡಿದ್ದ 241 ರನ್ಗಳ ಸಾಧಾರಣ ಗುರಿಯನ್ನು ಆಸೀಸ್ 7 ಓವರ್ ಉಳಿಸಿಕೊಂಡು 6 ವಿಕೆಟ್ನಿಂದ ಗೆದ್ದಿದೆ. 2003ರಲ್ಲಿ ಕಾಂಗರೂ ಪಡೆ ವಿರುದ್ಧ ಸೋಲು ಕಂಡಿದ್ದ ಭಾರತ, ಇದೀಗ 20 ವರ್ಷದ ನಂತರವೂ ವಿಶ್ವಕಪ್ ಫೈನಲ್ನಲ್ಲಿ ಸೋಲು ಕಂಡಿದೆ.
2003ರ ವಿಶ್ವಕಪ್ನಲ್ಲಿ ರಿಕಿ ಪಾಂಟಿಂಗ್ 140 ರನ್ ಗಳಿಸಿ ಭಾರತದ ಸೋಲಿಗೆ ಕಾರಣರಾದರೆ, 2023ರ ವಿಶ್ವಕಪ್ನಲ್ಲಿ ಟ್ರಾವಿಸ್ ಹೆಡ್ ಭಾರತಕ್ಕೆ ಮುಳುವಾದರು. ಚೊಚ್ಚಲ ವಿಶ್ವಕಪ್ ಫೈನಲ್ಗೆ ಪ್ರವೇಶಿಸಿ ವೆಸ್ಟ್ ಇಂಡೀಸ್ ವಿರುದ್ಧ ಸೋಲು ಕಂಡಿದ್ದ ಆಸ್ಟ್ರೇಲಿಯಾ ಮತ್ತೆಂದೂ ಫೈನಲ್ ಹಂತಕ್ಕೆ ಬಂದು ಎಡವಿಲ್ಲ. 1975ರ ನಂತರ 6 ಬಾರಿ ಫೈನಲ್ ಪ್ರವೇಶಿಸಿರುವ ಕಾಂಗರೂ ಪಡೆ ಪ್ರತಿ ಬಾರಿಯೂ ಚಾಂಪಿಯನ್ ಆಗಿದೆ.
ವಿಶ್ವಕಪ್ನ ಲೀಗ್ ಮತ್ತು ಸೆಮೀಸ್ ಸೇರಿ 10 ಪಂದ್ಯಗಳನ್ನು ಗೆದ್ದು ಫೈನಲ್ ಪ್ರವೇಶಿಸಿದ್ದ ಭಾರತ ಅಂತಿಮ ಪಂದ್ಯದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ನಿರೀಕ್ಷಿತ ಪ್ರದರ್ಶನ ತೋರಲಿಲ್ಲ. ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ತಂಡ ವಿರಾಟ್ ಕೊಹ್ಲಿ (54), ಕೆ ಎಲ್ ರಾಹುಲ್ (66) ಅರ್ಧಶತಕ ಮತ್ತು ನಾಯಕ ರೋಹಿತ್ ಶರ್ಮಾ ಅವರ 47 ರನ್ಗಳ ಕೊಡುಗೆಯಿಂದ 50 ಓವರ್ ಅಂತ್ಯಕ್ಕೆ ಎಲ್ಲಾ ವಿಕೆಟ್ ಕಳೆದುಕೊಂಡು 240 ರನ್ ಕಲೆಹಾಕಿತ್ತು.
241 ರನ್ಗಳ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾಕ್ಕೆ ಆರಂಭದಲ್ಲಿ ಭಾರತದ ಬೌಲರ್ಗಳು ಬಿಗಿ ದಾಳಿ ಮೂಲಕ ಕಾಡಿದರು. ಇದರಿಂದ ಮೂರು ವಿಕೆಟ್ ಆಸ್ಟ್ರೇಲಿಯಾ ಕಳೆದುಕೊಂಡಿತ್ತು. ಆದರೆ, ನಂತರ ನಾಲ್ಕನೇ ವಿಕೆಟ್ಗೆ ಟ್ರಾವಿಸ್ ಹೆಡ್ ಮತ್ತು ಮಾರ್ನಸ್ ಲಬುಶೇನ್ 192 ರನ್ ಪಾಲುದಾರಿಕೆ ಮೂಲಕ ಭಾರತ ತಂಡದಿಂದ ಗೆಲುವನ್ನು ಕಸಿದುಕೊಂಡರಲ್ಲದೆ, ಆಸೀಸ್ ಚಾಂಪಿಯನ್ ಪಟ್ಟ ಅಲಂಕರಿಸುವಂತೆ ಮಾಡಿದರು.
ಆಸೀಸ್ಗೆ ಆರಂಭಿಕ ಆಘಾತ: ಎರಡನೇ ಓವರ್ನಲ್ಲಿ ಮೊಹಮ್ಮದ್ ಶಮಿ ಡೇವಿಡ್ ವಾರ್ನರ್ (7) ವಿಕೆಟ್ ಪಡೆದರು. ಅವರ ಬೆನ್ನಲ್ಲೇ ಮಿಚೆಲ್ ಮಾರ್ಷ್ (15) ಮತ್ತು ಸ್ಟೀವನ್ ಸ್ಮಿತ್ (4) ವಿಕೆಟ್ ಉರುಳಿತು. ಶಮಿ 1 ವಿಕೆಟ್ ಪಡೆದರೆ, ಬುಮ್ರಾ 2 ವಿಕೆಟ್ ಕಬಳಿಸಿದರು. ಆದರೆ ನಂತರ ಭಾರತದ ಯಾವುದೇ ಬೌಲರ್ ಕೂಡ ವಿಕೆಟ್ ಪಡೆಯಲಿಲ್ಲ.
ಹೆಡ್, ಲಬುಶೇನ್ ಜೊತೆಯಾಟ: 47ಕ್ಕೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಆಸ್ಟ್ರೇಲಿಯಾಕ್ಕೆ 192 ರನ್ಗಳ ಪಾಲುದಾರಿಕೆಯನ್ನು ಟ್ರಾವಿಸ್ ಹೆಡ್ ಮತ್ತು ಮಾರ್ನಸ್ ಲಬುಶೇನ್ ಮಾಡಿದರು. ಈ ಜೊತೆಯಾಟ ಮುರಿಯುವಲ್ಲಿ ಟೀಮ್ ಇಂಡಿಯಾದ ಬೌಲರ್ಗಳು ವಿಫಲರಾದರು.