ಬೆಂಗಳೂರು : ಕೃಷಿ ಪಂಪ್ಸೆಟ್ಗೆ ಇನ್ನು ಮುಂದೆ ನಿರಂತರ 7 ತಾಸು ತ್ರಿಫೇಸ್ ವಿದ್ಯುತ್ ಪೂರೈಕೆ ಮಾಡಲು ನಿರ್ಧರಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ಇಂಧನ ಇಲಾಖೆ ಪರಿಶೀಲನೆ ನಡೆಸಿ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಮೂರು ವಾರಗಳ ಹಿಂದೆ ಇಂಧನ ಇಲಾಖೆಯಲ್ಲಿ ಪರಿಶೀಲನೆ ಮಾಡಲಾಗಿತ್ತು. ಆಗಲೇ ಕೃಷಿ ಪಂಪ್ಸೆಟ್ಗೆ ಏಳು ಗಂಟೆ ವಿದ್ಯುತ್ ಕೊಡುತ್ತೇವೆ ಎಂದು ಭರವಸೆ ಕೊಟ್ಟಿದ್ದೆವು. ಆಗ ನಮಗೆ ಐದು ಗಂಟೆ ವಿದ್ಯುತ್ ಕೊಟ್ಟರೆ ಸಾಕು ಎಂದು ಕೆಲವರು ಹೇಳಿದ್ದರು.
ಅದರ ಪ್ರಕಾರ ಐದು ಗಂಟೆ ವಿದ್ಯುತ್ ಕೊಡಲು ಸೂಚಿಸಿದ್ದೆ. ಬಳಿಕ ಐದು ಗಂಟೆ ಸಾಕಾಗಲ್ಲ ಏಳು ಗಂಟೆ ಕೊಡಬೇಕು ಎಂದು ಕೆಲವರು ಆಗ್ರಹಿಸಿದ್ದಾರೆ. ಅದರಂತೆ ಯಾದಗಿರಿ, ಕೊಪ್ಪಳ, ರಾಯಚೂರಿನಲ್ಲಿ ಏಳು ಗಂಟೆ ವಿದ್ಯುತ್ ಕೊಡಲು ಸೂಚನೆ ನೀಡಿದ್ದೆ.
ಈಗ ವಿದ್ಯುತ್ ಉತ್ಪಾದನೆಯಲ್ಲಿ ಸುಧಾರಣೆಯಾಗಿದ್ದು, ರಾಜ್ಯದ ಉಳಿದ ಎಲ್ಲಾ ಕಡೆಯೂ ಏಳು ಗಂಟೆ ವಿದ್ಯುತ್ ಕೊಡಲು ನಿರ್ಧರಿಸಿದ್ದೇವೆ ಎಂದು ಸಿಎಂ ಇದೇ ವೇಳೆ ಸ್ಪಷ್ಟಪಡಿಸಿದರು.