ಬೆಳಗಾವಿ: ಕಾಂಗ್ರೆಸ್ 28 ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿದ್ದು ತಪ್ಪಲ್ಲ. ಆದರೆ ಪ್ರಧಾನಿ ಮೋದಿ ಅವರ ಜೊತೆಗೆ ಹೋದರೆ ಕೋಮುವಾದಿ ಪಕ್ಷವಂತೆ. ನಮ್ಮದು ಕೇವಲ ಮೈಸೂರು ಭಾಗಕ್ಕೆ ಸೀಮಿತವಾದ ಪಕ್ಷವಲ್ಲ. ರಾಜ್ಯ, ರಾಷ್ಟ್ರದ ಪ್ರಮುಖ ಪಕ್ಷ ಎನ್ನುವ ಮೂಲಕ ಕೈ ನಾಯಕರಿಗೆ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ತಿರುಗೇಟು ಕೊಟ್ಟರು.
ಬೆಳಗಾವಿಯ ಕೆಪಿಟಿಸಿಎಲ್ ಸಭಾಂಗಣದಲ್ಲಿ ಇಂದು ಹಮ್ಮಿಕೊಂಡಿದ್ದ ಜೆಡಿಎಸ್ ಪುನಶ್ಚೇತನ ಪರ್ವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವನ್ನು ಕಿತ್ತೊಗೆಯುವ ಸಂಕಲ್ಪವನ್ನು ನಾವು ಮಾಡಬೇಕಿದೆ. ರಾಜ್ಯದಲ್ಲಿ ಕುಮಾರಸ್ವಾಮಿ ಸಿಎಂ, ದೇಶಕ್ಕೆ ನರೇಂದ್ರ ಮೋದಿ ಪಿಎಂ ಆಗಬೇಕು. ಪ್ರಾದೇಶಿಕ ಪಕ್ಷವನ್ನು ಉಳಿಸಿ, ಬೆಳೆಸಬೇಕಿದೆ. ದೇವೇಗೌಡರು ರಾಷ್ಟ್ರದ ದೊಡ್ಡ ನಾಯಕರು. ರಾಜ್ಯದಲ್ಲಿ ಬಡವರು, ರೈತರು ಉಳಿಯಬೇಕಾದರೆ ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿ ಆಗಬೇಕು ಎಂದು ತಿಳಿಸಿದರು.
ಪಂಚರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಿಸಲು ರಾಜ್ಯದಿಂದ ಹಣ ಸಂಗ್ರಹಿಸಲಾಗುತ್ತಿದೆ. ಇಲ್ಲಿನ ಮಂತ್ರಿಗಳು ರಾಜಾರೋಷವಾಗಿ ಲಂಚ ತೆಗೆದುಕೊಂಡು ಕಳುಹಿಸುತ್ತಿದ್ದಾರೆ. ಈಗ ಬೆಂಗಳೂರಿನಲ್ಲಿ ಸಿಕ್ಕಿರುವ 42 ಕೋಟಿ ಹಣ ತೆಲಂಗಾಣಕ್ಕೆ ಕಳುಹಿಸಲು ಇಟ್ಟಿದ್ದರು ಎಂದು ಜಿ.ಟಿ.ದೇವೇಗೌಡ ಆರೋಪಿಸಿದರು.
ರಾಜ್ಯದಲ್ಲಿ ಭೀಕರ ಬರಗಾಲ ಸ್ಥಿತಿಯಿದೆ. ಯಾವೊಬ್ಬ ಸಚಿವರು ಕೂಡಾ ರೈತರ ಸಮಸ್ಯೆ ಆಲಿಸುವ ಕೆಲಸ ಮಾಡುತ್ತಿಲ್ಲ. ರಾಜ್ಯದ ಸಮಸ್ಯೆಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡುವ ಶಕ್ತಿ ಯಾರಿಗಾದರೂ ಇದ್ದರೆ, ಅದು ಕುಮಾರಸ್ವಾಮಿ ಅವರಿಗೆ ಮಾತ್ರ. ನಾಡಿನ ಅನೇಕ ಮಠಗಳ ಸ್ವಾಮೀಜಿಗಳು ಬಿಜೆಪಿಯೊಂದಿಗೆ ಸೇರಿ ರಾಜ್ಯ ಉಳಿಸುವಂತೆ ಸಲಹೆ ನೀಡಿದ್ದಾರೆ. ಅದರಂತೆ ನಾವು ಬಿಜೆಪಿ ಬೆಂಬಲಿಸುತ್ತಿದ್ದೇವೆ ಎಂದು ಜಿ.ಟಿ.ದೇವೇಗೌಡ ಹೇಳಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಬಂಡೆಪ್ಪ ಕಾಶಂಪೂರ, ಎಚ್.ಕೆ.ಕುಮಾರಸ್ವಾಮಿ, ವೆಂಕಟಗೌಡ ನಾಡಗೌಡರ, ಆಲ್ಕೋಡು ಹನುಮಂತಪ್ಪ, ಮಾಜಿ ಶಾಸಕರಾದ ವೈ.ಎಸ್.ವಿ.ದತ್ತಾ, ಕೃಷ್ಣಾರೆಡ್ಡಿ ಸೇರಿದಂತೆ ಮತ್ತಿತರರು ಇದ್ದರು.