ಬೆಂಗಳೂರು: ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ದೇವೇಗೌಡರ ಕುಟುಂಬವನ್ನು ಬಿಟ್ಟು ಯಾರನ್ನು ಬೇಕಾದರೂ ಖರೀದಿ ಮಾಡುವ ಶಕ್ತಿ ಇದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಹೇಳಿದ್ದಾರೆ.
ಯಶವಂತಪುರದಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆಗೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ತಮ್ಮ ವಿರುದ್ಧ ದಾಖಲೆ ಬಿಡುಗಡೆ ಮಾಡಿದರೆ ಭಯ ಇಲ್ಲ ಎಂಬ ಹೇಳಿಕೆ ನೀಡಿದ ಡಿ ಕೆ ಶಿವಕುಮಾರ್ ಅವರ ಹೇಳಿಕೆಯ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದರು.
ಅವರು ಯಾರಿಗೂ ಹೆದರಲ್ಲ. ಅವರು ಯಾರನ್ನು ಬೇಕಾದರೂ ಖರೀದಿ ಮಾಡುತ್ತಾರೆ. ಬಿಜೆಪಿಯ ದೆಹಲಿಯ ನಾಯಕರನ್ನೇ ಖರೀದಿ ಮಾಡಿದರೂ ಅಚ್ಚರಿ ಇಲ್ಲ. ಯಾರನ್ನು ಬೇಕಾದರೂ ಅವರು ಖರೀದಿ ಮಾಡಬಹುದು, ಅವರಿಗೆ ಆ ಶಕ್ತಿ ಇದೆ ಎಂದು ಹೆಚ್ಡಿಕೆ ವಾಗ್ದಾಳಿ ನಡೆಸಿದರು.
ಈವರೆಗೂ ಮಾಡಿಕೊಂಡಿದ್ದು ಸಾಕು. ಇನ್ನಾದರೂ ಲೂಟಿ ಹೊಡೆಯೋದು ನಿಲ್ಲಿಸಿ, ಅಣ್ಣ ಅಂತಿರಲ್ಲ. ಅಣ್ಣನಾಗಿ ಹೇಳುತ್ತೇನೆ. ಇನ್ನಾದರೂ ಈ ಲೂಟಿ ನಿಲ್ಲಿಸಿ. ಈ ಕಿವಿಮಾತು ಕೇಳಿದರೆ ನಿಮ್ಮನ್ನು ತಮ್ಮ ಎಂದು ಒಪ್ಪಿಕೊಳ್ಳುತ್ತೇನೆ ಎಂದು ಡಿಸಿಎಂ ಡಿಕೆಶಿ ವಿರುದ್ಧ ಕುಮಾರಸ್ವಾಮಿ ಅವರು ವಾಗ್ದಾಳಿ ನಡೆಸಿದರು. ನೈಸ್ ಅಕ್ರಮಗಳ ದಾಖಲೆ ಶೀಘ್ರವೇ ಬಿಡುಗಡೆ ಮಾಡುತ್ತೇನೆ. ಇದರಲ್ಲಿ ಸಂಶಯ ಇಲ್ಲ. ಈ ಯೋಜನೆ ಹೆಸರಲ್ಲಿ ಏನೇನು ಆಗಿದೆ? ಎಷ್ಟೆಲ್ಲ ಅಕ್ರಮ ನಡೆದಿದೆ? ಯಾರೆಲ್ಲಾ ಫಲಾನುಭವಿಗಳು ಇದ್ದಾರೆ? ಎಲ್ಲವನ್ನೂ ಜನರ ಮುಂದಿಡುತ್ತೇನೆ. ಕೆಲವರ ಹಣೆಬರಹ ಆಚೆಗೆ ಬರುತ್ತದೆ ಎಂದು ಅವರು ಪ್ರಶ್ನೆಯೊಂದಕ್ಕೆ ಕುಮಾರಸ್ವಾಮಿ ಉತ್ತರ ನೀಡಿದರು.
ದಾಖಲೆ ಬಿಡುಗಡೆ ಸಮಸ್ಯೆ ಇದೆ: ಬುಧವಾರ ಚಂದ್ರಯಾನ -3 ರೋವರ್ ಚಂದ್ರನ ಮೇಲೆ ಇಳಿಯಲಿದೆ. ಎಲ್ಲರಂತೆ ನನಗೂ ಕುತೂಹಲ ಇದೆ. ಪ್ರತಿಯೊಬ್ಬರ ಗಮನವೂ ಆ ಕಡೆಯೇ ಇರುತ್ತದೆ. ಹೀಗಾಗಿ ಕೆಲ ದಿನದಲ್ಲಿ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ. ಕೆಲವರು ನೈಸ್ ಯೋಜನೆ ದೇವೇಗೌಡರ ಪಾಪದ ಕೂಸು ಎಂದು ಹೇಳಿದ್ದಾರೆ. ಅವರಿಗೆ ಗೊತ್ತಿರಲಿ, ಯೋಜನೆಯ ಮೂಲ ಒಪ್ಪಂದ ಏನಿದೆ? ಅದನ್ನು ಅವರು ಓದಿಕೊಳ್ಳಬೇಕು. ಅದನ್ನು ಪೂರ್ಣವಾಗಿ ತಿಳಿದು ಮಾತನಾಡಿದರೆ ಚೆನ್ನಾಗಿರುತ್ತದೆ ಎಂದು ಹೇಳಿದರು.
ಇವರ ಮಹಾನ್ ಸಾಧನೆಗಳನ್ನೆಲ್ಲ ಬಿಡುಗಡೆ ಮಾಡುತ್ತೇನೆ: ದೇವೇಗೌಡರು ಒಪ್ಪಂದ ಮಾಡಿಕೊಂಡಿದ್ದು ರಸ್ತೆ ಮಾಡಲಿ ಎಂದು, ಬೆಂಗಳೂರು ಮತ್ತು ಮೈಸೂರು ನಡುವೆ ಓಡಾಡುವ ಜನರಿಗೆ ಒಳ್ಳೆಯದಾಗಲಿ ಎಂದು ಈ ಮಹಾನುಭಾವರು ಮಾಡಿದ್ದೇನು? ಮೂಲ ಒಪ್ಪಂದವನ್ನು ಹೇಗೆಲ್ಲ ತಿರುಚಿದರು, ಇವರ ಮಹಾನ್ ಸಾಧನೆಗಳನ್ನೆಲ್ಲ ಬಿಡುಗಡೆ ಮಾಡುತ್ತೇನೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಗುಡುಗಿದರು.
Laxmi News 24×7