ಕೊಪ್ಪಳ : ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಶಾಖಾಪುರ ಗ್ರಾಮದಲ್ಲಿ ಸಮರ್ಪಕ ಬಸ್ ವ್ಯವಸ್ಥೆ ಇಲ್ಲದ ಕಾರಣ ಪ್ರೌಢಶಾಲೆ ವಿದ್ಯಾರ್ಥಿಗಳು ಜೆಸಿಬಿ ಯಂತ್ರದಲ್ಲಿ ಕುಳಿತು ಶಾಲೆಗೆ ತೆರಳಿದ ಘಟನೆ ನಡೆದಿದೆ.
ಸಮವಸ್ತ್ರ ಧರಿಸಿದ್ದ ಹತ್ತಾರು ವಿದ್ಯಾರ್ಥಿಗಳು ಕೊಪ್ಪಳ-ಕುಷ್ಟಗಿ ರಾಜ್ಯ ಹೆದ್ದಾರಿಯಲ್ಲಿ ಜೆಸಿಬಿಯ ಹಿಂದಿನ ಬಕೆಟ್ ಮತ್ತು ಕ್ಯಾಬಿನ್ ಒಳಗೆ ಕುಳಿತು ಶಾಲೆಗೆ ತೆರಳಿದರು.
ಶಾಖಾಪುರ ಕ್ರಾಸ್ ಸಮೀಪ ವಿದ್ಯಾರ್ಥಿಗಳು ನಿಂತಿದ್ದರೂ ಕುಷ್ಟಗಿಯಿಂದ ಕೊಪ್ಪಳಕ್ಕೆ ಹೋಗುವ ಸಾರಿಗೆ ಬಸ್‌ಗಳು ನಿಲ್ಲುವುದಿಲ್ಲ. ಬಹುತೇಕ ಬಸ್‌ಗಳು ತಡೆರಹಿತವಾಗಿವೆ. ಅಷ್ಟೇ ಅಲ್ಲ ಈಚೆಗೆ ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ದೊರೆತ ಬಳಿಕ ಬಸ್‌ಗಳು ಕುಷ್ಟಗಿಯಿಂದಲೇ ತುಂಬಿ ಬರುತ್ತಿವೆ. ಹಾಗಾಗಿ ಶಾಖಾಪುರ ಕ್ರಾಸ್ ಬಳಿ ನಿಂತ ಮಕ್ಕಳನ್ನು ಹತ್ತಿಸಿಕೊಳ್ಳುತ್ತಿಲ್ಲ.ಬಸ್ ಸೌಲಭ್ಯ ಸಮರ್ಪಕವಾಗಿ ಇಲ್ಲದಿರುವುದರಿಂದ ಟ್ರ್ಯಾಕ್ಟರ್, ಟಂಟಂ ಸೇರಿ ರಸ್ತೆಯಲ್ಲಿ ಸಿಕ್ಕ ವಾಹನಗಳಲ್ಲಿ ಸಂಚರಿಸುವುದು ಸಾಮಾನ್ಯ ಎಂದು ಶಾಖಾಪುರದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು