ಖಾನಾಪುರ: ‘ಬಿಜೆಪಿ ಟಿಕೆಟ್ ಸಿಗುತ್ತದೆ ಎಂಬ ಭರವಸೆಯಲ್ಲಿದ್ದ ನನಗೆ ತುಂಬ ಆಘಾತವಾಗಿದೆ. ನನ್ನೊಂದಿಗೆ ಇಷ್ಟು ದಿನ ಇದ್ದ ಕಾರ್ಯಕರ್ತರೊಂದಿಗೆ ಚರ್ಚಿಸಿದ ಬಳಿಕ ಮುಂದಿನ ಹೆಜ್ಜೆ ಇಡುತ್ತೇನೆ’ ಎಂದು ಬಿಜೆಪಿ ನಾಯಕಿ ಡಾ.ಸೋನಾಲಿ ಸರನೋಬತ್ ಹೇಳಿದರು.
ಪಟ್ಟಣದಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ‘ಕಳೆದ ಹಲವು ತಿಂಗಳಿಂದ ಖಾನಾಪುರ ಕ್ಷೇತ್ರದ ಉದ್ದಗಲ ಸಂಚರಿಸಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದ ನನಗೆ ಇಲ್ಲಿಯ ಜನರೊಂದಿಗೆ ಭಾವನಾತ್ಮಕ ಸಂಬಂಧವಿದೆ. ಇಲ್ಲಿಯ ಕಾಂಗ್ರೆಸ್ ಅಭ್ಯರ್ಥಿ ಮಹಿಳೆ ಮತ್ತು ವೃತ್ತಿಯಲ್ಲಿ ವೈದ್ಯೆ ಇರುವ ಕಾರಣ ಅವರಿಗೆ ಪ್ರಬಲ ಪೈಪೋಟಿ ನೀಡುವ ಉದ್ದೇಶದಿಂದ ನಾನು ಪೂರ್ಣ ಸಿದ್ಧತೆಯೊಂದಿಗೆ ಕಣಕ್ಕೆ ಧುಮುಕುವ ಸಿದ್ಧತೆ ಮಾಡಿದ್ದೆ. ಟಿಕೆಟ್ ಘೋಷಣೆಯ ವಿಷಯದಲ್ಲಿ ಬಿಜೆಪಿ ವರಿಷ್ಢರು ಕೈಗೊಂಡ ನಿರ್ಣಯದಿಂದ ನೋವು ಉಂಟಾಗಿದೆ’ ಎಂದರು.
14ರಂದು ಮುಂದಿನ ನಿರ್ಧಾರ: ‘ಕ್ಷೇತ್ರದ ಸಹಕಾರ ಮತ್ತು ರಾಜಕೀಯ ರಂಗದ ಪರಿಣಿತರೊಂದಿಗೆ ಚರ್ಚಿಸಿದ ಬಳಿಕ ಏ. 14ರಂದು ಸಂವಿಧಾನ ಶಿಲ್ಪಿಯ ಜಯಂತಿ ಮುಂದಿನ ರಾಜಕೀಯ ನಡೆ ನಿರ್ಧಾರ ಮಾಡುತ್ತೇನೆ’ ಎಂದು ಮಾಜಿ ಶಾಸಕ ಅರವಿಂದ ಪಾಟೀಲ ಹೇಳಿದರು.
ಪಟ್ಟಣದಲ್ಲಿ ತಮ್ಮ ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ಅವರು, ‘ಬಿಜೆಪಿ ಟಿಕೆಟ್ ನೀಡದ್ದರಿಂದ ನಿರಾಸೆಯಾಗಿದೆ. ಅಭಿಮಾನಿಗಳು, ಬೆಂಬಲಿಗರ ಅಭಿಪ್ರಾಯ ಕ್ರೂಢೀಕರಿಸಿ ಮುಂದಿನ ಯೋಜನೆ ರೂಪಿಸುತ್ತೇನೆ’ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಾಬುರಾವ್ ದೇಸಾಯಿ, ಮಂಜುಳಾ ಕಾಪಸೆ, ಮಲ್ಲಪ್ಪ ಮಾರಿಹಾಳ, ಮಹಾರುದ್ರಯ್ಯ ಹಿರೇಮಠ, ಸಂಜಯ ಹಲಗೇಕರ, ವಿಠ್ಠಲ ಹಿಂಡಲಕರ, ಮಹಾಂತೇಶ ಸಾಣಿಕೊಪ್ಪ ಹಾಗೂ ಇತರರು ಅರವಿಂದ ಪಾಟೀಲ ಕೈಗೊಳ್ಳುವ ನಿರ್ಧಾರಕ್ಕೆ ಬದ್ಧರಾಗಿರುವುದಾಗಿ ತಿಳಿಸಿದರು.