ಬೆಂಗಳೂರು: ಲಂಚ ಪ್ರಕರಣದಲ್ಲಿ ನಿನ್ನೆ (ಮಾ.27) ರಾತ್ರಿ ಬಂಧನವಾಗಿರುವ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಲೋಕಾಯುಕ್ತ ಕಚೇರಿಯಲ್ಲೇ ಒಂದು ರಾತ್ರಿ ಕಳೆದಿದ್ದಾರೆ. ತೀವ್ರ ವಿಚಾರಣೆ ನಡೆಸಿದ ಬಳಿಕವು ಹಣ ಮೂಲಕ್ಕೆ ನಿಖರವಾದ ದಾಖಲೆಗಳನ್ನು ನೀಡಲು ವಿಫಲವಾಗಿರುವ ಮಾಡಾಳ್ ಅವರನ್ನು ಲೋಕಾಯುಕ್ತ ಅಧಿಕಾರಿಗಳು ನ್ಯಾಯಾಲಯದ ಮುಂದೆ ಹಾಜರುಪಡಿಸಿ ತಮ್ಮ ಕಸ್ಟಡಿಗೆ ಕೇಳಲಿದ್ದಾರೆ.
ನಿನ್ನೆ ಬಂಧನವಾದ ಮಾಡಾಳ್ಗೆ ರಾತ್ರಿ 12 ಗಂಟೆವರೆಗೆ ಲೋಕಾಯುಕ್ತ ಅಧಿಕಾರಿಗಳು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಆದರೆ, ಯಾವೊಂದು ಪ್ರಶ್ನೆಗೂ ಸರಿಯಾಗಿ ಉತ್ತರ ನೀಡಿಲ್ಲ. 8 ಕೋಟಿ ಎಲ್ಲಿಂದ ಬಂತು? ಅದರ ಮೂಲ ಯಾವುದು? ಎಲ್ಲಿಗೆ ತಲುಪಿಸುತ್ತಿದ್ದರು? ಮುಂತಾದ ಪ್ರಶ್ನೆಗಳನ್ನು ಮಾಡಾಳ್ ಮುಂದೆ ಇಡಲಾಗಿತ್ತು. ಆದರೆ, ಉತ್ತರಿಸಲು ಅವರು ತಡಬಡಾಯಿಸಿದ್ದಾರೆ ಎನ್ನಲಾಗಿದೆ. ವಿಚಾರಣೆ ಮುಗಿಸಿ, ತನಿಖಾಧಿಕಾರಿಗಳು ಹೊರಟ ಬಳಿಕ ಮಾಡಾಳ್, ಅಲ್ಪಸ್ವಲ್ಪ ನಿದ್ರೆಗೆ ಜಾರಿದ್ದರು.
ಲೋಕಾಯುಕ್ತ ಕಚೇರಿಯಲ್ಲಿ ಮೊದಲ ರಾತ್ರಿ ಕಳೆದ ಮಾಡಾಳ್ ಅವರ ರಾತ್ರಿ ವಾಸ್ತವ್ಯಕ್ಕೆ ಪ್ರತ್ಯೇಕ ಮಂಚ, ಹಾಸಿಗೆ , ದಿಂಬು, ಊಟ ಮತ್ತು ನೀರಿನ ವ್ಯವಸ್ಥೆ ಮಾಡಲಾಗಿತ್ತು. ತಮ್ಮ ಆಪ್ತರ ಮೂಲಕ ಲೋಕಾ ಕಚೇರಿಗೆ ಮಾಡಾಳ್ ಎಲ್ಲವನ್ನು ತರಿಸಿಕೊಂಡರು.
ಅಂದಹಾಗೆ ಬೆಂಗಳೂರಿಗೆ ಬರುವ ವೇಳೆ ತುಮಕೂರಿನ ಕ್ಯಾತ್ಸಂದ್ರದ ಬಳಿಯೇ ಮಾಡಾಳ್ ಅವರನ್ನು ವಶಕ್ಕೆ ಪಡೆದು ಬೆಂಗಳೂರಿಗೆ ಕರೆ ತರಲಾಗಿದೆ. ಹೈಕೋರ್ಟ್ನಿಂದ ಜಾಮೀನು ರದ್ದಾದರೆ, ಮಾಡಾಳ್ ತಪ್ಪಿಸಿಕೊಳ್ಳದಂತೆ, ನಿಗಾವಹಿಸಲು ಪ್ರತ್ಯೇಕ ಐದು ತಂಡಗಳನ್ನು ರಚನೆ ಮಾಡಲಾಗಿತ್ತು. ಎಸ್ಪಿ ಕೆ.ವಿ ಅಶೋಕ್ ನೇತೃತ್ವದಲ್ಲಿ 5 ವಿಶೇಷ ತಂಡಗಳನ್ನ ಐಜಿಪಿ ಸುಬ್ರಹ್ಮಣ್ಯೇಶ್ವರ ರಾವ್ ರಚಿಸಿದ್ದರು.
ಇಂದು ಕೋರ್ಟ್ಗೆ ಹಾಜರು
ಲೋಕಾಯುಕ್ತ ಪೊಲೀಸರು ಶಾಸಕ ಮಾಡಳ್ ವಿರೂಪಾಕ್ಷಪ್ಪ ಅವರನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಎದುರು ಹಾಜರು ಪಡಿಸಿ, ತಮ್ಮ ಕಸ್ಟಡಿಗೆ ಕೇಳಲಿದ್ದಾರೆ. ಹೆಚ್ಚಿನ ವಿಚಾರಣೆ ಅಗತ್ಯ ಹಿನ್ನಲೆ ಮತ್ತೆ ವಶಕ್ಕೆ ನೀಡುವಂತೆ ಮನವಿ ಮಾಡಲಿದ್ದಾರೆ. ಈ ಹಿಂದೆ ವಿಚಾರಣೆಗೆ ಹಾಜರಾಗಿದ್ದ ಸಮಯದಲ್ಲೂ ಸರಿಯಾಗಿ ಸಹಕಾರ ನೀಡಿಲ್ಲ ಮತ್ತು ಸಮರ್ಪಕವಾದ ಉತ್ತರ ನೀಡಿಲ್ಲ. ಹಣದ ಮೂಲಕ್ಕೆ ಪೂರಕವಾದ ಸಾಕ್ಷ್ಯಾಧಾರಗಳನ್ನು ಸಹ ಒದಗಿಸಿಲ್ಲ. ಹಣದ ಮೂಲದ ಕುರಿತಂತೆ ಪುರಾವೆ ನೀಡಲು ಮೀನಮೇಷ ಎಣಿಸುತ್ತಿದ್ದಾರೆ. ಹಲವು ಬಾರಿ ವಿಚಾರಣೆ ವೇಳೆಯಲ್ಲೂ ಹಣದ ಮೂಲದ ದಾಖಲೆ ನೀಡಲು ವಿಫಲವಾಗಿದ್ದಾರೆ. ಮೊದಲಿಗೆ ಕೃಷಿ ಮೂಲದ ಹಣ ಎಂದು ಮಾಡಳ್ ವಿರೂಪಾಕ್ಷಪ್ಪ ಹೇಳಿದ್ದರು. ಆ ಬಳಿಕ ವಿಚಾರಣೆ ವೇಳೆ ಸೂಕ್ತ ದಾಖಲೆಗಳ ಒದಗಿಸಿ, ಸಮರ್ಥಿಸಲು ತಡಬಡಾಯಿಸಿದ್ದರು. ಹೀಗಾಗಿ ಕಸ್ಟಡಿಗೆ ಕೇಳಲು ಅಧಿಕಾರಿಗಳು ಮುಂದಾಗಿದ್ದಾರೆ.